ADVERTISEMENT

ಉಕ್ಕಿನ ಕಾರ್ಖಾನೆ ಆರಂಭಕ್ಕೆ ವಿರೋಧ; ಕೊಪ್ಪಳ ಬಂದ್‌ಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:02 IST
Last Updated 24 ಫೆಬ್ರುವರಿ 2025, 11:02 IST
<div class="paragraphs"><p>ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಜನ</p></div>

ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಜನ

   

ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಕೂಗಳತೆ ದೂರದಲ್ಲಿ ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌) ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇ೦ಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದಕ್ಕಾಗಿ ಸೋಮವಾರ ಹಮ್ಮಿಕೊಂಡಿದ್ದ ಕೊಪ್ಪಳ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿರುವ 202 ಸಣ್ಣ, ಮಧ್ಯಮ ಮತ್ತು ಬೃಹತ್‌ ಕಾರ್ಖಾನೆಗಳಿಂದ ಜನ ಹಾಗೂ ಜಾನುವಾರಗಳ ಮೇಲೆ ಆಗುತ್ತಿರುವ ಗಂಭೀರ ಪರಿಣಾಮ ಬಂದ್‌ ವೇಳೆ ಪ್ರತಿಧ್ವನಿಸಿತು. ಈಗಿರುವ ಕಾರ್ಖಾನೆಗಳಿಂದಲೇ ಸಾಕಷ್ಟು ಕಪ್ಪು ದೂಳು ಬರುತ್ತಿದ್ದು, ಒಂದು ವೇಳೆ ಬಿಎಸ್‌ಪಿಎಲ್‌ ಕಾರ್ಖಾನೆ ಆರಂಭವಾದರೆ ಕೊಪ್ಪಳವನ್ನೇ ಸ್ಥಳಾಂತರಿಸಬೇಕಾಗುತ್ತದೆ ಎನ್ನುವ ಆತಂಕವೂ ಹೋರಾಟಗಾರರಿಂದ ಕೇಳಿಬಂತು.

ADVERTISEMENT

ಇಲ್ಲಿನ ಗವಿಮಠದ ಆವರಣದಿಂದ ತಾಲ್ಲೂಕು ಕ್ರೀಡಾಂಗಣದ ತನಕ ನಡೆದ ಜನಾಂದೋಲನ ಜಾಥಾಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಎಲ್ಲ ಪಕ್ಷಗಳ, ಧರ್ಮಗಳ ಹಾಗೂ 150ಕ್ಕೂ ಹೆಚ್ಚು ಸಂಘಟನೆಗಳು ಕೊಪ್ಪಳ ಬಂದ್‌ಗೆ ಬೆಂಬಲ ನೀಡಿದ್ದವು. ಜಾಥಾ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಗವಿಮಠದ ಸ್ವಾಮೀಜಿ ’ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟದಲ್ಲಿಯೂ ಕಪ್ಪು ದೂಳು ಬೀಳುತ್ತಿದೆ’ ಎಂದು ಹೇಳಿದರು.

ಕೊಪ್ಪಳದಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು

’ಈಗಿರುವ ಕಾರ್ಖಾನೆಗಳಿಂದ ಕೊಪ್ಪಳದ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತೆ ಕಾರ್ಖಾನೆ ಸ್ಥಾಪಿಸಿದರೆ ಎಲ್ಲಿಗೆ ಹೋಗಬೇಕು. ಕೃಷಿ ಭೂಮಿ ಜವಳಾಗಿದೆ. ಬಿಎಸ್‌ಪಿಎಲ್‌ ಕಾರ್ಖಾನೆ ಆರಂಭವಾದರೆ ನಮ್ಮಲ್ಲಿ ತೊಟ್ಟಿಲು ತೂಗುವ ಕೈಗಳಿಗಿಂತ ಸ್ಮಶಾನಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಾಗುತ್ತದೆ. ಈಗಿನ ಹದಗೆಟ್ಟ ವಾತಾವರಣದಿಂದ ಬುದ್ಧಿಮಾಂಧ್ಯ ಮಕ್ಕಳು ಹುಟ್ಟುತ್ತಿದ್ದಾರೆ. ಗಂಡಸರು ನಪುಂಸಕರಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದಾಲೂ ಮತ್ತೊಂದು ಕಾರ್ಖಾನೆ ಬೇಕೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.