ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಸಮೀಪದಲ್ಲಿ ಯುಕೆಇಎಂ ಕಂಪನಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನ ವಿರೋಧ ವ್ಯಕ್ತಪಡಿಸಿ ಕಾರ್ಖಾನೆ ಆರಂಭಕ್ಕೆ ಅನುಮತಿ ಕೊಡಬಾರದು ಎಂದು ಸೋಮವಾರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಖಾನೆ ಆರಂಭಿಸಿದರೆ ಈಗ ಗುರುತಿಸಿರುವ ಜಾಗದಲ್ಲಿ 500 ಮೀಟರ್ ಮಾತ್ರ ದೂರವಿರುವ ಗೊಂಡಬಾಳ ಮತ್ತು ಮುದ್ದಾಬಳ್ಳಿ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉದ್ದೇಶಿತ ಜಾಗದಲ್ಲಿ ಈಗಾಗಲೇ ಸರ್ಕಾರಿ ಮೊರಾರ್ಜಿ ವಸತಿ ಶಾಲೆ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಕಾರ್ಖಾನೆಯಿಂದ ಬರುವ ಕಲುಷಿತ ನೀರು ಸ್ಥಳೀಯ ಜಲಸಂಪತ್ತುಗಳಾದ ಜೀವನಾಡಿ ತುಂಗಭದ್ರ ನದಿ, ಕೊಳವೆ ಬಾವಿಗಳನ್ನು ಮಾಲಿನ್ಯ ಮಾಡುತ್ತಿದೆ. ಈ ಪ್ರದೇಶದಲ್ಲಿ ವಿವಿಧ ಬಗೆಯ ಪಕ್ಷಿ ಪ್ರಭೇದಗಳಿದ್ದು ಅವುಗಳ ಸಂತತಿ ನಾಶವಾಗುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಕಾರ್ಖಾನೆ ಆರಂಭವಾದರೆ ಕೀಟನಾಶಕಗಳು ಮತ್ತು ಕಾರ್ಖಾನೆಯ ಹೊಗೆ ಶ್ವಾಸಕೋಶದ ರೋಗಗಳು, ಚರ್ಮರೋಗಗಳು, ಟಿ.ಬಿ. ಬರುವ ಅಪಾಯವಿದೆ, ಕಲುಷಿತ ನೀರು ಭೂಮಿಯ ಫಲವತ್ತತೆಯನ್ನು ಕುಗ್ಗಿಸಿ ಬೆಳೆಗಳಿಗೆ ಹಾನಿ ಮಾಡಿ ಇಳುವರಿ ಕುಂಠಿತವಾಗುತ್ತದೆ. ಇಷೆಲ್ಲ ಅಪಾಯಗಳಿದ್ದ ಮೇಲೂ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಂದಾಗಿದ್ದು ಸರಿಯಲ್ಲ. ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಉದ್ದೇಶಿತ ಸಕ್ಕರೆ ಕಾರ್ಖಾನೆ ಜಾಗ ಈಗಾಗಲೇ ಎನ್.ಎ. ಆಗಿದೆ. ಗ್ರಾಮಸ್ಥರು ಅಲ್ಲಿ ಕಾರ್ಖಾನೆ ಸ್ಥಾಪನೆ ಬೇಡ ಎನ್ನುತ್ತಿದ್ದಾರೆ. ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು.ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.