ADVERTISEMENT

ಕೊಪ್ಪಳ | ಸಾವಯವ ಕೃಷಿಗೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:43 IST
Last Updated 17 ಅಕ್ಟೋಬರ್ 2025, 6:43 IST
ಕೊಪ್ಪಳದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಹಾಗೂ ಉಪನ್ಯಾಸ ನೀಡಿದವರಿಗೆ ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಹಾಗೂ ಉಪನ್ಯಾಸ ನೀಡಿದವರಿಗೆ ಸನ್ಮಾನಿಸಲಾಯಿತು   

ಕೊಪ್ಪಳ: ‘ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿದ್ದು, ಕೃಷಿ ಮತ್ತು ಪಶು ಸಖಿಯರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹೇಳಿದರು.

ಜಿಲ್ಲಾ ಪಂಚಾಯಿತಿಯ ಇಲ್ಲಿನ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಗುರುವಾರ ಆತ್ಮ ಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಹಯೋಗದಲ್ಲಿ ನಡೆದ ವಿಶ್ವ ಆಹಾರ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಸ್ಥಾಪನೆ ದಿನವನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಎಲ್ಲಾ ಜನರಿಗೂ ಸಹ ಒಳ್ಳೆಯ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸಿ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಆಹಾರ ದಿನ ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ಜನ ಹೆಚ್ಚು ಫಾಸ್ಟ್‌ಫುಡ್‌ ಸೇವನೆ ಮಾಡುತ್ತಿದ್ದು ಇದು ರೋಗಕ್ಕೆ ಆಹ್ವಾನ ನೀಡಿದಂತೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕೃಷಿಯಲ್ಲಿ ರಸಾಯನಿಕ ಗೊಬ್ಬರ, ಕೀಟ ನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡಿ ಬೆಳೆದ ದವಸ ದಾನ್ಯಗಳು, ತರಕಾರಿಗಳು, ಹಣ್ಣುಗಳ ಸೇವನೆಯಿಂದಾಗಿ ಮನುಷ್ಯನ ದೇಹದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಪರಂಪರಾಗತ ಕೃಷಿ ಯೋಜನೆಯಡಿ ಜಿಲ್ಲೆಯ ಹಳ್ಳಿಗಳನ್ನು ಸಾವಯವ ಕೃಷಿ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಜಿಲ್ಲೆಯ ಎಲ್ಲಾ ರೈತರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ವಿ.ಕೆ. ಕಮತರ, ಗಂಗಾವತಿ ಕೃಷಿ ಮಹಾವಿದ್ಯಾಲಯ ಕೀಟಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಬದ್ರಿಪ್ರಸಾದ ಪಿ.ಆರ್., ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾಣಿ ಆಹಾರ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಣಕಾರ ಪಿ.ಎಸ್., ಪಶು ಇಲಾಖೆ ಉಪ ನಿರ್ದೇಶಕ ಪಿ.ಎಂ. ಮಲ್ಲಯ್ಯ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ವಿ. ರವಿ, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕೊಪ್ಪಳದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ಹಾಗೂ ಸಾರ್ವಜನಿಕರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.