ADVERTISEMENT

ಕಾರಟಗಿ | ವೈದ್ಯ ವಿದ್ಯಾರ್ಥಿನಿ ಕೊಲೆಗೆ ಆಕ್ರೋಶ: ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 14:18 IST
Last Updated 20 ಆಗಸ್ಟ್ 2024, 14:18 IST
ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ಕಾರಟಗಿಯಲ್ಲಿ ವೈದ್ಯರು, ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಪಂಜಿನ ಮೆರವಣಿಗೆ ನಡೆಸಿದರು
ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ಕಾರಟಗಿಯಲ್ಲಿ ವೈದ್ಯರು, ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಪಂಜಿನ ಮೆರವಣಿಗೆ ನಡೆಸಿದರು   

ಕಾರಟಗಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮತ್ತು ಆಸ್ಪತ್ರೆ, ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ಪಂಜಿನ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪಟ್ಟಣದ ಡಾ.ರಾಜಕುಮಾರ ಕಲಾಮಂದಿರದ ಮುಂಭಾಗದಲ್ಲಿ ಜಮಾಯಿಸಿದ ಖಾಸಗಿ ವೈದ್ಯರು, ವಿವಿಧ ಸಂಘಟನೆಗಳ ಪ್ರಮುಖರಾದ ಡಾ.ಶಿಲ್ಪಾ ಆನಂದ ದಿವಟರ, ಡಾ.ಸುಲೋಚನಾ, ಡಾ.ಎಂ.ಈ. ಮುದಗಲ್‌, ಡಾ.ಮಧುಸೂಧನ ಹುಲಿಗಿ ಮತ್ತಿತರರು ಮಾತನಾಡಿ, ‘ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಘಟನೆಯನ್ನು ವಿಶ್ವವೇ ಖಂಡಿಸುತ್ತಿದೆ. ಇದೊಂದು ಪೈಶಾಚಿಕ, ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಘಟನೆಯಿಂದ ವೃತ್ತಿ ಬಾಂಧವರಲ್ಲಿ ಭಯ ಮೂಡಿದೆ. ತ್ವರಿತ ತನಿಖೆಯ ಮೂಲಕ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಅನಾರೋಗ್ಯಕರ ಬೆಳವಣಿಗೆಗಳು ನಿರಂತರವಾಗಿ ನಡೆಯುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.

‘ಶೀಘ್ರ ಆರೋಪಿಗಳನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಮೆರವಣಿಗೆಯಲ್ಲಿ ಘೋಷಣೆಗಳು ಮೊಳಗಿದವು.

ADVERTISEMENT

ಹೆಜ್ಜೆ ಮಹಿಳಾ ಸಂಘಟನೆ ಡಾ. ಶಿಲ್ಪಾ ಆನಂದ ದಿವಟರ್‌ ನೀಡಿದ ಕರೆಗೆ ಗಂಗಾವತಿ ಭಾರತೀಯ ವೈದ್ಯಕೀಯ ಸಂಘ ಟನೆಯ ವೈದ್ಯರು ಸಹಿತ ವಿವಿಧ ಸಂಘಟನೆಗಳ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.