ADVERTISEMENT

ನಿಡಶೇಸಿ: ಸಮಾಜ ಪರಿವರ್ತನೆಗೆ ‘ಸದ್ಭಾವನೆ ಪಾದಯಾತ್ರೆ’

50 ಹಳ್ಳಿಗಳಲ್ಲಿ ಸಂಚರಿಸುವ ಉದ್ದೇಶ; ಜನರಿಂದ ಉತ್ತಮ ಪ್ರತಿಕ್ರಿಯೆ

ಎ.ನಾರಾಯಣರಾವ ಕುಲಕರ್ಣಿ
Published 18 ಡಿಸೆಂಬರ್ 2024, 6:18 IST
Last Updated 18 ಡಿಸೆಂಬರ್ 2024, 6:18 IST
ಕುಷ್ಟಗಿ ತಾಲ್ಲೂಕು ನಿಡಶೇಸಿಯ ಕರಿಬಸವ ಸ್ವಾಮೀಜಿ ಹಿರೇಅರಳಿಹಳ್ಳಿಯಲ್ಲಿ ‘ಸದ್ಭಕ್ತರೊಂದಿಗೆ ಸದ್ಬಾವನೆ ಪಾದಯಾತ್ರೆ’ ಕೈಗೊಂಡರು
ಕುಷ್ಟಗಿ ತಾಲ್ಲೂಕು ನಿಡಶೇಸಿಯ ಕರಿಬಸವ ಸ್ವಾಮೀಜಿ ಹಿರೇಅರಳಿಹಳ್ಳಿಯಲ್ಲಿ ‘ಸದ್ಭಕ್ತರೊಂದಿಗೆ ಸದ್ಬಾವನೆ ಪಾದಯಾತ್ರೆ’ ಕೈಗೊಂಡರು   

ನಿಡಶೇಸಿ (ಕುಷ್ಟಗಿ): ವ್ಯಸನಮುಕ್ತ ಸಮಾಜದ ಕನಸು, ಯುವಜನರನ್ನು ಸರಿದಾರಿಯಲ್ಲಿ ಮುನ್ನಡೆಸುವ ಆಶಯದೊಂದಿಗೆ ಕಳೆದ ಎರಡು ತಿಂಗಳಿನಿಂದಲೂ ಕೈಗೊಂಡು ಈಗ ಶತ ದಿನ ಪೂರೈಸಿರುವ ತಾಲ್ಲೂಕಿನ ನಿಡಶೇಸಿ ಗ್ರಾಮದ ಪಶ್ಛಕಂಥಿ ಹಿರೇಮಠದ ಅಭಿನವ ಕಿರಿಯ ಸ್ವಾಮೀಜಿ ಅವರ ‘ಸದ್ಭಕ್ತರೊಂದಿಗೆ ಸದ್ಭಾವನೆ ಪಾದಯಾತ್ರೆ’ಗೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಷ್ಟೇ 20ನೇ ವಯೋಮಾನಕ್ಕೆ ಕಾಲಿರಿಸಿರುವ ಸ್ವಾಮೀಜಿ ಕಿರಿಯ ವಯಸ್ಸಿನಲ್ಲೇ ಹಿರಿದಾದ ಸಾಧನೆಗೆ ಮುಂದಡಿ ಇಟ್ಟಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧನ–ಕನಕ ಕೇಳದ ಸ್ವಾಮೀಜಿಯ ಜೋಳಿಗೆಗೆ ಸಾಕಷ್ಟು ಜನರು ಗೌರವ, ಸಮರ್ಪಣಾ ಭಾವನೆಯೊಂದಿಗೆ ತಮ್ಮ ಚಟಗಳ ಭಿಕ್ಷೆ ನೀಡುವ ಮೂಲಕ ಅವರ ಆಶಯಕ್ಕೆ ಸ್ಪಂದಿಸುತ್ತಿರುವುದು ಕಂಡುಬಂದಿದೆ.

ಪಟ್ಟಾಧಿಕಾರ ಮಹೋತ್ಸವದ ಮೊದಲ ವಸಂತವನ್ನು ಪೂರೈಸುವ ಮೊದಲೇ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ, ಚಟ ದಾಸ್ಯದಿಂದ ಯುವಕರನ್ನು ಮುಕ್ತಗೊಳಿಸುವ ಸಂಕಲ್ಪದೊಂದಿಗೆ ಕುಷ್ಟಗಿ, ಯಲಬುರ್ಗಾ ತಾಲ್ಲೂಕುಗಳ ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ಕೈಗೊಂಡಿರುವ ಕರಿಬಸವ ಸ್ವಾಮೀಜಿ ಪಾದಯಾತ್ರೆಯುದ್ದಕ್ಕೂ ಜನರ ಮನ ಪರಿವರ್ತನೆಯ ಪ್ರಯತ್ನವನ್ನಂತೂ ನಡೆಸಿರುವುದು ವಿಶೇಷ.

ADVERTISEMENT

ಯಾವ ಮಠಾಧೀಶರೂ ಕಾಲಿಡದ ಅನೇಕ ಊರುಗಳ ಭೇಟಿಗೆ ಆದ್ಯತೆ ನೀಡಿದ್ದು ಈಗಾಗಲೇ 19 ಹಳ್ಳಿಗಳಲ್ಲಿ ತಲಾ ಆರು ದಿನಗಳಂತೆ ಪಾದಯಾತ್ರೆ ಕೈಗೊಂಡಿದ್ದು ಕನಿಷ್ಟ 50 ಹಳ್ಳಿಗಳಲ್ಲಿ ಸಂಚರಿಸುವ ಉದ್ದೇಶ ಇರಿಸಿಕೊಂಡಿದ್ದಾರೆ. ಮಂದಿರ, ಮಸೀದಿ, ಅಸ್ಪೃಶ್ಯರು, ಮೇಲ್ಜಾತಿ, ಕೆಳಜಾತಿ ಎನ್ನುವ ಮತಭೇದ ಎಣಿಸದೆ ಸಮಾಜದಲ್ಲಿನ ಎಲ್ಲ ಸಮುದಾಯಗಳ ಜನ ತಮ್ಮ ಮನೆ ಬಾಗಿಲಿಗೆ ಬರುವ ಸ್ವಾಮೀಜಿಯನ್ನು ಮನೆಯ ಮಗನಂತೆ ಬರಮಾಡಿಕೊಳ್ಳುತ್ತಿದ್ದಾರೆ.

ಓಣಿಗಳನ್ನೆಲ್ಲ ತಳಿರುತೋರಣ, ಬಣ್ಣದ ರಂಗೋಲಿ ಹಾಕಿ ಪುಷ್ಪವೃಷ್ಠಿಯ ಮೂಲಕ ಜನರು ಸ್ವಾಮೀಜಿಯನ್ನು ಸ್ವಾಗತಿಸುತ್ತಿದ್ದಾರೆ. ಬೆಳಿಗ್ಗೆ ಪಾದಯಾತ್ರೆ ಸಂಜೆ ವಿಶೇಷ ಪ್ರವಚನದೊಂದಿಗೆ ಜನರನ್ನು ಜಾತಿಭೇದ ಮರೆತು ಜನರಲ್ಲಿ ಸೌಹಾರ್ದತೆಯ ಸದ್ಭಾವನೆ ಬಿತ್ತುವಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ ಎನ್ನಲಾಗಿದೆ. ಈ ಯಾತ್ರೆಗೆ ತಗಲುವ ವೆಚ್ಚವನ್ನೆಲ್ಲ ಮಠದಿಂದಲೇ ಭರಿಸಲಾಗುತ್ತಿದ್ದು ಭಕ್ತರ ಮೇಲೆ ಯಾವುದೇ ಹೊರೆ ಇಲ್ಲ. ಹಾಗಾಗಿ ಪಾದಯಾತ್ರೆ ಯಶಸ್ವಿಯತ್ತ ಮುನ್ನಡೆದಿದೆ ಎಂದು ಭಕ್ತರು ಹೇಳಿದರು.

ಆಧುನಿಕ ಸಮಾಜದಲ್ಲಿ ಯುವಕರು ಮೊಬೈಲ್‌ ಇತರೆ ಚಟಗಳಲ್ಲೇ ಕಳೆದು ಹೋಗಬಾರದು ಉತ್ತಮ ಪ್ರಜೆಗಳಾಗಿ ದೇಶದ ಆಸ್ತಿಯಾಗಬೇಕು ಎಂಬುದು ಪಾದಯಾತ್ರೆಯ ಉದ್ದೇಶ
ಅಭಿನವ ಕರಿಬಸವ ಶ್ರೀ ನಿಡಶೇಸಿ ಮಠ
ಮಠದ ಆಸ್ತಿ ಹೆಚ್ಚಿಸಿಕೊಳ್ಳಲು ಸ್ವಾಮೀಜಿ ಜನರಿಂದ ಏನನ್ನೂ ಕೇಳುತ್ತಿಲ್ಲ ಕಿರಿಯ ವಯಸ್ಸಿನಲ್ಲೇ ಸಮಾಜದ ಒಳಿತಿಗಾಗಿ ಚಟಭಿಕ್ಷೆ ಬೇಡಿ ಪಾದಯಾತ್ರೆ ಕೈಗೊಂಡಿರುವುದು ಮಾದರಿಯಾಗಿದೆ
ಶರಣಗೌಡ ಪಾಟೀಲ ತಳುವಗೇರಾ ಗ್ರಾಮಸ್ಥ

‘ಚಟ ಬಿಡುವ ಭಯಕ್ಕೆ ಮನೆ ಬಿಟ್ಟರು’

ಸ್ವಾಮೀಜಿ ಮನೆಗೆ ಬಂದವರೇ ಮೊದಲು ಕೇಳುವುದು ಹಣ ಬೇಡ ನಿಮ್ಮ ಚಟಳಿದ್ದರೆ ಈ ಜೋಳಿಗೆಗೆ ಹಾಕಿ ಎಂದರು. ಅವರ ಮಾತಿಗೆ ಮನ್ನಣೆ ನೀಡಿದ ಅನೇಕರು ಮದ್ಯದ ಬಾಟಲಿ ತಂಬಾಕು ಗುಟ್ಕಾ ಚೀಟುಗಳನ್ನು ಜೋಳಿಗೆಗೆ ಹಾಕಿದ್ದಾರೆ. ಆದರೆ ಅನೇಕ ಯುವಕರು ಸ್ವಾಮೀಜಿ ಚಟ ಬಿಡಿಸುತ್ತಾರೆ ಎಂಬ ಕಾರಣಕ್ಕೆ ಅವರು ಬರುವ ಮೊದಲೇ ಮನೆಯಿಂದ ಪರಾರಿಯಾದ ಉದಾಹರಣೆಗಳೂ ಇವೆ. ಮನಪರಿವರ್ತನೆಗೊಳ್ಳದ ಇನ್ನೂ ಕೆಲವರು ‘ಬ್ಯಾರೆ ಏನ ಕೇಳ್ರಿ ಕೊಡ್ತೀವಿ ಆದ್ರ ಮದ್ಯ ಗುಟ್ಕಾ ಬಿಡೋದು ಆಗಂಗಿಲ್ರಿ ನೋಡ್ರಿ’ ಎಂದೇ ಖಡಾಖಂಡಿತವಾಗಿ ಹೇಳಿ ಅಚ್ಚರಿ ಮೂಡಿಸಿದರು ಎಂಬುದನ್ನು ಗ್ರಾಮಸ್ಥರು ‘ಪ್ರಜಾವಾಣಿ’ಗೆ ವಿವರಿಸಿದರು. ಕೇವಲ ಪುರುಷರಷ್ಟೇ ಅಲ್ಲ ಮಹಿಳೆಯರೂ ನಶ್ಯ ಸೇರಿದಂತೆ ತಂಬಾಕು ವಸ್ತುಗಳನ್ನು ಸ್ವಾಮೀಜಿ ಜೋಳಿಗೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.