ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಕ್ಕು: ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಬದಲು

ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 1:59 IST
Last Updated 21 ಜನವರಿ 2021, 1:59 IST
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೊಪ್ಪಳದಲ್ಲಿ ಬುಧವಾರ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಜನ ಪ್ರಜಾವಾಣಿ ಚಿತ್ರ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೊಪ್ಪಳದಲ್ಲಿ ಬುಧವಾರ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಜನ ಪ್ರಜಾವಾಣಿ ಚಿತ್ರ   

ಕೊಪ್ಪಳ: ‘ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂಬ ಬೇಡಿಕೆ ಇಂದು, ನಿನ್ನೆಯದಲ್ಲ. ಇದಕ್ಕೆ ಮೂರು ದಶಕಗಳ ಇತಿಹಾಸ ಇದೆ. ಸರ್ಕಾರ ನಿರ್ಲಕ್ಷ್ಯ ಮಾಡದೇ ಮೀಸಲಾತಿ ನೀಡಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಕುಷ್ಟಗಿ ರಸ್ತೆಯ ಪಂಚಮಸಾಲಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಲಿಂಗಾಯತ ಸಮಾಜದ ಒಳಪಂಗಡಗಳಲ್ಲಿ ನಮ್ಮದು ದೊಡ್ಡ ಸಮುದಾಯ. ಆದರೆ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಇಲ್ಲದ ಕಾರಣ ಹಿಂದುಳಿಯುತ್ತ ಬಂದಿದೆ. ಕೃಷಿಯನ್ನು ಕುಲಕಸಬನ್ನಾಗಿ ಮಾಡಿಕೊಂಡ ಸಮುದಾಯಕ್ಕೆ ಮೀಸಲಾತಿ ನೀಡುವುದು ಸರ್ಕಾರದ ಹಕ್ಕು’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮಾಜಕ್ಕೆ ಮೀಸಲಾತಿ ನೀಡಿದರೆ ಅವರಿಗೆ ಋಣಿಯಾಗಿರುತ್ತೇವೆ. ಸಂಸದ ಸಂಗಣ್ಣ ಕರಡಿ, ಸಚಿವ ಸಿ.ಸಿ.ಪಾಟೀಲ ಈ ಕುರಿತು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಮ್ಮ ಬೇಡಿಕೆಗಳನ್ನು ಕಡೆಗಣಿಸಿದರೆ ಪಾದಯಾತ್ರೆ ಕಲ್ಯಾಣ ಕರ್ನಾಟಕ ದಾಟುವುದರೊಳಗಾಗಿ ಹೋರಾಟ ಬೇರೆ ಸ್ವರೂಪ ಪಡೆಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹೋರಾಟದ ಕಿಚ್ಚು ಕೊಪ್ಪಳದಿಂದಲೇ: ‘ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟಕ್ಕೆ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹನುಮನಾಳ ಗುರುಗಳು ಸೇರಿ ಅನೇಕರು ಶ್ರಮಿಸಿದ್ದಾರೆ. ಅವರೇ ಈ ಹೋರಾಟದ ಕಿಚ್ಚು ಹಚ್ಚಿದ್ದಾರೆ. ಸಮಾಜದ ಬೇಡಿಕೆಗೆ ಯಾವುದೇ ನಿಬಂಧನೆ ವಿಧಿಸದೆ ಸಿಎಂ ಮೀಸಲಾತಿ ನೀಡಬೇಕು. ಕುಲಶಾಸ್ತ್ರೀಯ ಅಧ್ಯಯನ, ವರದಿ ಎಂದು ಕಾಲಹರಣ ಮಾಡದೇ ಇದೇ ಅವಧಿಯಲ್ಲಿ ಮೀಸಲಾತಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಸಮಾಜದ ಅಭ್ಯುದಯಕ್ಕಾಗಿ ಈ ಹೋರಾಟ ನಡೆಯುತ್ತಿದೆ. ಇದರಲ್ಲಿ ಗೋವಿಂದ ಕಾರಜೋಳ, ಮತ್ತಿತರ ಮುಖಂಡರು ಮೂಗು ತೂರಿಸುವುದು ಬೇಕಿಲ್ಲ. ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು. ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಹೆಚ್ಚಿಸಬೇಕು ಎಂದು ಹೋರಾಟ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಅವರ ಬೇಡಿಕೆ ಈಡೇರಿಸಿ 2ಎಗೆ ನಮ್ಮ ಸಮಾಜವನ್ನು ಸೇರಿಸಬೇಕು’ ಎಂದು ಮನವಿ ಮಾಡಿದರು.

‘ಕೂಡಲಸಂಗಮದಿಂದ ಹೊರಟ ಈ ಪಾದಯಾತ್ರೆಗೆ ಎಲ್ಲ ಪಕ್ಷದ, ಎಲ್ಲ ಜಾತಿಯ ಜನರ ಬೆಂಬಲ ದೊರೆತಿದೆ. ಹರಿಹರ ಪೀಠದ ಶ್ರೀಗಳ ಬೆಂಬಲ ಕೂಡ ಇದೆ. ಮುಂದಿನ ಹೋರಾಟದಲ್ಲಿ ಎಲ್ಲರೂ ಬಂದು ಭಾಗವಹಿಸುತ್ತಿದ್ದಾರೆ. ಬಸವನಗೌಡ ಪಾಟೀಲ ಯತ್ನಾಳ ಅವರು ಮುಖ್ಯ ಭಾಷಣ ಮಾಡಬೇಕಿತ್ತು. ಆದರೆ ನಮ್ಮ ಸಮಯದಲ್ಲಿ ಹೊಂದಾಣಿಕೆ ಆಗದೇ ಇರುವುದರಿಂದ ಅವರು ಮುಂದೆ ನಮ್ಮ ಜತೆ ಸೇರಿಕೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಕಾಶಪ್ಪನವರ, ವೀಣಾ ಕಾಶಪ್ಪನವರ,ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಶಿವರಾಮನಗೌಡ, ಈಶಪ್ಪ ಭೂತೆ, ಕರಿಯಪ್ಪ ಮೇಟಿ ಹಾಗೂ ಕಿಶೋರಿ ಬೂದನೂರ ಇದ್ದರು.

ಪಾದಯಾತ್ರೆಯಲ್ಲಿ ನೂರಾರು ಜನ ಭಾಗಿ

ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ತಾಲ್ಲೂಕಿನಲ್ಲಿ ಪ್ರವಾಸ ಮುಗಿಸಿ ಕೊಪ್ಪಳ ತಾಲ್ಲೂಕಿನ ಕಿನ್ನಾಳದ ಮೂಲಕ ಪಾದಯಾತ್ರೆಯು ಬುಧವಾರ ಬೆಳಿಗ್ಗೆ ನಗರ ಪ್ರವೇಶಿಸಿತು.

ಸ್ವಾಮೀಜಿ ಮತ್ತು ಮುಖಂಡರು ಕುಷ್ಟಗಿ ರಸ್ತೆಯ ಪಂಚಮಸಾಲಿ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಗರದಲ್ಲಿ 10 ಕಿ.ಮೀ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯಲ್ಲಿ ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು. ಷಟಸ್ಥಲ ಮತ್ತು ಕೇಸರಿ ಧ್ವಜಗಳು ಯಾತ್ರೆಯುದ್ದಕ್ಕೂ ರಾರಾಜಿಸಿದವು. ವಿವಿಧ ಭಕ್ತಿ ಮತ್ತು ಹೋರಾಟದ ಗೀತೆಗಳು ಜನರನ್ನು ಹುರಿದುಂಬಿಸಿದವು.

ಭಾಗ್ಯನಗರ, ಕಿನ್ನಾಳ ರಸ್ತೆ, ಅಶೋಕ ವೃತ್ತ, ಬಸವೇಶ್ವರ ವೃತ್ತದಲ್ಲಿ ಸಮಾಜದ ಸಾವಿರಾರು ಜನರು ಜಮಾವಣೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ‘ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಘೋಷಿಸಿದರು.

ಪಾದಯಾತ್ರೆಯುದ್ದಕ್ಕೂ ಹರ, ಹರ ಮಹಾದೇವ, ಪಂಚಮಸಾಲಿ ಪಂಚ ಲಕ್ಷ ಹೆಜ್ಜೆ ಎಂಬ ಘೋಷಣೆಗಳು ಕೇಳಿಬಂದವು. ಸಮಾಜದ ಮುಖಂಡರು, ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಸಾಥ್‌ ನೀಡಿದರು.

‘ಯಡಿಯೂರಪ್ಪ ಮಾಡದಿದ್ದರೆ ಮತ್ತಾರು ಮಾಡುತ್ತಾರೆ?’

‘ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ. ಅವರಿಗೆ ನಮ್ಮ ಬೆಂಬಲ ಸದಾ ಇದೆ. 15 ಮಂದಿ ಶಾಸಕರನ್ನು, ಇಬ್ಬರು ಸಂಸದರನ್ನು ನೀಡಿ ಅವರ ಅಧಿಕಾರವನ್ನು ಗಟ್ಟಿಮಾಡಿದ್ದೇವೆ. ಅವರೇ ಮೀಸಲಾತಿ ಕಲ್ಪಿಸದಿದ್ದರೆ ಮತ್ತಾರೂ ಕೊಡುತ್ತಾರೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.

ಅವರು ನಗರದಲ್ಲಿ ಪಾದಯಾತ್ರೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಒಕ್ಕಲಿಗರಿಗೆ ದೇವೇಗೌಡರು ಎಲ್ಲ ಅನುಕೂಲ ಮಾಡಿದ್ದಾರೆ. ದೇವರಾಜ್ ಅರಸು ಹಿಂದುಳಿದವರಿಗೆ ಮಾಡಿದ್ದಾರೆ. ಯಡಿಯೂರಪ್ಪ ಮಾಡಿದರೆ ಏನು ತಪ್ಪು. ಮೀಸಲಾತಿ ನೀಡಿದರೆ ಅವರನ್ನು ಸಮಾಜ ಕೊನೆಯವರೆಗೂ ಸ್ಮರಿಸಿಕೊಳ್ಳುತ್ತದೆ. ನಿರಾಣಿ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಆ ವಿಷಯವೇ ಬೇರೆ, ಹೋರಾಟದ ವಿಷಯವೇ ಬೇರೆ’ ಎಂದರು.

‘ನಮ್ಮ ಸಮುದಾಯದ ಶಾಸಕರು, ಸಚಿವರು, ಸಂಸದರಿಗೆನಾವು ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ. ಅವರುಸರ್ಕಾರದೊಳಗೆ ಇದ್ದುಕೊಂಡು ಹೋರಾಟ ಮಾಡಿದರೆ, ನಾವು ಹೊರಗೆ ಇದ್ದುಕೊಂಡು ಹೋರಾಟ ಮಾಡುತ್ತೇವೆ. ಅದಾಗದಿದ್ದರೆ ವಿಧಾನಸೌಧಕ್ಕೆ ಹೋಗಿ ಮೀಸಲಾತಿ ತೆಗೆದುಕೊಂಡು ಬರುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.