ADVERTISEMENT

ಪಂಚಮಸಾಲಿಗರ ಮೇಲೆ ಲಾಠಿ ಪ್ರಹಾರಕ್ಕೆ ಒಂದು ವರ್ಷ: ಬೆಳಗಾವಿಯಲ್ಲಿ ಕರಾಳ ದಿನ ನಾಳೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:19 IST
Last Updated 9 ಡಿಸೆಂಬರ್ 2025, 6:19 IST
ಕುಷ್ಟಗಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಂಚ ಸೇನಾ ಸಂಘದ ಅಧ್ಯಕ್ಷ ಶರಣಪ್ಪ ಅಮರಕ್ಕನವರ ಮಾತನಾಡಿದರು
ಕುಷ್ಟಗಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಂಚ ಸೇನಾ ಸಂಘದ ಅಧ್ಯಕ್ಷ ಶರಣಪ್ಪ ಅಮರಕ್ಕನವರ ಮಾತನಾಡಿದರು   

ಕುಷ್ಟಗಿ: ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದವರು ಕಳೆದ ವರ್ಷ ಬೆಳಗಾವಿಯ ಸುವರ್ಣಸೌಧದ ಬಳಿ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಸರ್ಕಾರ ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ನಡೆಸಿದ್ದ ಘಟನೆಗೆ ಡಿ.10ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಅದೇ ದಿನ ಬೆಳಗಾವಿಯಲ್ಲಿ ಸಮುದಾಯ ಕರಾಳ ದಿನ ಆಚರಿಸಲು ಪಂಚಮಸಾಲಿ ಸಮಾಜ ನಿರ್ಧರಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಇಲ್ಲಿ ಸಭೆ ನಡೆಸಿದ ಸಮುದಾಯದ ಪ್ರಮುಖರು, ವಕೀಲರು ಇತರರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಬೆಳಗಾವಿಯಲ್ಲಿ ಮೌನ ಪಥ ಸಂಚಲನ ನಡೆಸಲಾಗುತ್ತದೆ’ ಎಂದರು.

‘ತಾಲ್ಲೂಕಿನಿಂದ ಸಮುದಾಯದ ಬಹಳಷ್ಟು ಜನರು, ಯುವಕರು ಶಾಂತಿಯುತವಾಗಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದು ಕಿತ್ತೂರ ಚನ್ನಮ್ಮಳ ಭಾವಚಿತ್ರ ಹಿಡಿದು, ಕೈ ಮತ್ತು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿ ಎಂಥಹದ್ದು ಎಂಬುದನ್ನು ತೋರಿಸಲಿದ್ದೇವೆ’ ಎಂದು ಪಂಚಮಸಾಲಿ ವಕೀಲರ ಸಂಘದ ಜಿಲ್ಲಾ ಸಂಚಾಲಕ ಎಸ್‌.ಜಿ.ಪಾಟೀಲ ಹೇಳಿದರು.

ADVERTISEMENT

‘2ಎ ಮೀಸಲಾತಿಗಾಗಿ ಹೋರಾಟ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತ ಬಂದಿದ್ದು, ಅದು ನಮ್ಮ ಹಕ್ಕು ಕೂಡ ಹೌದು. ಆದರೆ ಸರ್ಕಾರ ದುರಹಂಕಾರದಿಂದ ಪಂಚಮಸಾಲಿ ಸಮುದಾಯದ ಪ್ರಮುಖರ ಮೇಲೆ ಹಲ್ಲೆ ನಡೆಸುವ ಮೂಲಕ ಶಕ್ತಿ ಕುಂದಿಸುವ ಹುನ್ನಾರ ನಡೆಸಿತು. ಬಸವ ಜಯಮೃತ್ಯುಂಜ ಸ್ವಾಮೀಜಿ ನಮ್ಮ ಸಮುದಾಯದ ಮಕ್ಕಳ ಭವಿಷ್ಯದ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ದಡ ಸೇರುವವರೆಗೂ ಹೋರಾಟ ನಿಲ್ಲದು’ ಎಂದರು.

ತಾಲ್ಲೂಕು ಪಂಚಸೇನಾ ಸಂಘದ ಅಧ್ಯಕ್ಷ ಶರಣಪ್ಪ ಅಮರಕ್ಕನವರ, ವಕೀಲರಾದ ಮಹಾಂತೇಶ ಬಂಡೇರ, ವೀರೇಶ ನಾಲತ್ವಾಡ ಮಾತನಾಡಿ, ‘ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ. ಶ್ರೀಗಳು ಹಿಂದೆ ಬೆಂಗಳೂರಿನಲ್ಲಿ ಧರಣಿ ನಡೆಸಿದ ವೇಳೆಯೂ ಹಲ್ಲೆ ನಡೆಸಲಾಯಿತು. ಬೆಳಗಾವಿಯಲ್ಲಿಯೂ ಸರ್ಕಾರದ ಪುಂಡಾಟಿಕೆ ಮುಂದುವರಿದಿದ್ದನ್ನು ನೋಡಿದರೆ ಇದರ ಹಿಂದೆ ಷಡ್ಯಂತ್ರ ಇದೆ ಎಂಬುದು ಗೊತ್ತಾಗುತ್ತದೆ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗಲೂ ಮೀಸಲಾತಿ ಸಿಗಲಿಲ್ಲ. ಆದರೆ ಬೇರೆ ಸರ್ಕಾರದಲ್ಲಿ ಆಗದ ದೌರ್ಜನ್ಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ನಡೆಯಿತು. ಇಂತಹ ಘಟನೆಯ ಹಿಂದೆ ಕೆಲ ವ್ಯಕ್ತಿಗಳ ಕುಮ್ಮಕ್ಕು ಇದೆ’ ಎಂದು ಆರೋಪಿಸಿದರು.

ಪ್ರಮುಖರಾದ ಶಿವಪ್ಪ ಗೆಜ್ಜಲಗಟ್ಟಿ, ಪ್ರಕಾಶ ನಾಯಕವಾಡಿ, ಸಿದ್ರಾಮಪ್ಪ ಕೌದಿ, ಬಸವರಾಜ ಕಾಮನೂರು, ಸಿ.ಎನ್‌.ಉಪ್ಪಿನ, ಎಸ್‌.ಬಿ.ಪಾಟೀಲ, ಸುರೇಶ ಗುಡದೂರು, ಆನಂದ ತಳುವಗೇರಾ, ಪುಟ್ಟರಾಜ ದಂಡಿನ, ಬಸವರಾಜ ಸೂಡಿ, ಆದೇಶ ರಾಮತ್ನಾಳ ಇತರರು ಇದ್ದರು.

ಶಾಸಕ ಕಾಶಪ್ಪನವರ್‌ ವಿರುದ್ಧ ಕಿಡಿ

‘ಬಿಜೆಪಿ ಸರ್ಕಾರ ಇದ್ದಾಗ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ನಂತರ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದ ಅವಿವೇಕಿ’ ಎಂದು ಪಂಚಮಸಾಲಿ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಜರಿದರು. ಅಷ್ಟೇ ಅಲ್ಲ ಪಂಚಮಸಾಲಿ ಶ್ರೀಗಳನ್ನು ಟ್ರಸ್ಟ್‌ನಿಂದ ಹೊರಹಾಕಿದ್ದನ್ನು ಖಂಡಿಸಿದ ಅವರು ಪಂಚಮಸಾಲಿ ಸಮುದಾಯದಿಂದ ಕಾಶಪ್ಪನವರೇ ಹೊರತು ಕಾಶಪ್ಪನವರಿಂದ ಸಮಾಜ ಅಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಮಾಜವನ್ನು ಬಳಕೆ ಮಾಡಿಕೊಂಡ ಕಾಶಪ್ಪನವರಿಗೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಬರುವ ಚುನಾವಣೆಯಲ್ಲಿ ಸಮುದಾಯ ತಕ್ಕಪಾಠ ಕಲಿಸಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.