ADVERTISEMENT

ಆಟಿಕೆ ಸಾಮಾನುಗಳ ಘಟಕಕ್ಕೆ ಭೂಮಿ: ನ್ಯಾಯಾಲಯದ ಮೆಟ್ಟಿಲೇರಿದ ರೈತರು

ಆಟಿಕೆಗಳ ತಯಾರಿಕಾ ಘಟಕಕ್ಕೆ ನಿಯಮ ಬಾಹಿರ ಭೂಮಿ ಖರೀದಿ: ಆರೋಪ

ಮಂಜುನಾಥ ಅಂಗಡಿ
Published 8 ನವೆಂಬರ್ 2021, 6:00 IST
Last Updated 8 ನವೆಂಬರ್ 2021, 6:00 IST
   

ಕುಕನೂರು (ಕೊಪ್ಪಳ ಜಿಲ್ಲೆ): ಮೇಕ್ ಇನ್ ಇಂಡಿಯಾ ಯೋಜನೆಯಡಿ ತಾಲ್ಲೂಕಿನ ಭಾನಾಪುರ ಗ್ರಾಮದ ಬಳಿ ತಲೆ ಎತ್ತಲಿರುವ ದೇಶದ ಮೊದಲ ಆಟಿಕೆ ವಸ್ತುಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಯಮ ಬಾಹಿರವಾಗಿ ಭೂಮಿ ಖರೀದಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಲ ರೈತರು ಯಲಬುರ್ಗಾದ ಹಿರಿಯ ಶ್ರೇಣಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ.

ತಳಕಲ್ಲ ಗ್ರಾಮದ ರೈತ ಮಹಿಳೆಯರಾದ ನೀಲಮ್ಮ ಮತ್ತು ಫಕೀರಮ್ಮ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದು, ಭೂಮಿ ಮಾರಾಟ ಪ್ರಕ್ರಿಯೆಗೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

‘ಏಕಸ್’ ಕಂಪನಿಯು ಆಟಿಕೆ ವಸ್ತುಗಳ ತಯಾರಿಕಾ ಘಟಕ ನಿರ್ಮಿಸುವ ಹೊಣೆ ಹೊತ್ತಿದೆ. ಇದಕ್ಕಾಗಿ ರೈತರಿಂದ 225 ಎಕರೆ ಭೂಮಿ ಖರೀದಿಸಲಾಗಿದೆ. 2021ರ ಜನವರಿ 9ರಂದು ಘಟಕ ನಿರ್ಮಾಣ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದ್ದರು. ಸದ್ಯ ಕಾಮಗಾರಿ ನಡೆಯುತ್ತಿದೆ. ಭೂಮಾಲೀಕರಿಂದ ನೇರವಾಗಿ ಜಮೀನು ಖರೀದಿಸುವ ಬದಲು ಏಜೆಂಟರ ಮೂಲಕ ಖರೀದಿ ಮಾಡಲಾಗಿದೆ ಎಂದು ರೈತರು ದೂರಿದ್ದಾರೆ.

ADVERTISEMENT

‘ಸೋಲಾರ್ ಘಟಕ ಅಳವಡಿಕೆ ಹೆಸರಿನಲ್ಲಿ ಮೊದಲು ಕೆಲವು ಎಕರೆ ಜಮೀನನ್ನು ಲೀಸ್‌ಗೆ ಪಡೆಯಲಾಗಿದೆ. ಈ ವೇಳೆ ಕೆಲ ರೈತರಿಂದ
ಏಜೆಂಟರು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಪಡೆದು ಅದನ್ನು ಬಳಸಿ, ಜಮೀನನ್ನು ಕಂಪನಿಗೆ ಮಾರಿದ್ದಾರೆ. 30 ರೈತರಿಗೆ ಸೇರಿದ 70 ಎಕರೆ ಜಮೀನನ್ನು ಜಿಪಿಎ ಮಾಡಿ, ಸಂಬಂಧಿಸಿದ ರೈತರ ಗಮನಕ್ಕೆ ತರದೇ ಮಾರಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.

‘ಭಾನಾಪುರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಆಟಿಕೆ ಕ್ಲಸ್ಟರ್‌ನ ಭೂಮಿ ಖರೀದಿ ಮಾಡುವಲ್ಲಿರೈತರಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡಲಾಗುವುದು’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಪ್ಪ ಕೋಳೂರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.