ಕುಷ್ಟಗಿ: ಒಂದೆಡೆ ತಾಂತ್ರಿಕ ಅಡಚಣೆ, ಇನ್ನೊಂದೆಡೆ ಹುನಗುಂದ, ಇಳಕಲ್ ಭಾಗಗಳ ರೈತರ ಅಸಹಕಾರ, ಮೊತ್ತೊಂದೆಡೆ ಕೊಪ್ಪಳ ಜಿಲ್ಲೆಯ ಅಧಿಕಾರಿಗಳ, ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿ. ಈ ಎಲ್ಲ ಕಾರಣಗಳಿಂದ ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ಜನವಸತಿ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಸರಬರಾಜು (ಡಿಬಿಒಟಿ) ಯೋಜನೆ ಮರೀಚಿಕೆ ಆಗಿರುವುದು ಕಂಡುಬಂದಿದೆ.
ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಯ ಎರಡು ಭಾಗಗಳಲ್ಲಿ ಅಂದರೆ ಎಲ್ ಅಂಡ್ ಟಿ ಖಾಸಗಿ ಕಂಪನಿ ನಿರ್ವಹಣೆಯಲ್ಲಿ ಡಿಬಿಒಟಿ ವ್ಯವಸ್ಥೆ ಮೂಲಕ ಓವರ್ ಹೆಡ್ ಟ್ಯಾಂಕ್‌ವರೆಗೆ ನೀರು ತಲುಪಿಸುವುದು ಮತ್ತು ಜೆಜೆಎಂ ಮೂಲಕ ಜನರ ಮನೆಗಳಿಗೆ ನೀರು ತಲುಪಿಸುವುದು. ಆದರೆ ಯೋಜನೆ ಆರಂಭಗೊಂಡು ಎರಡು ವರ್ಷ ಕಳೆದರೂ ನೀರು ಪೂರೈಕೆ ವ್ಯವಸ್ಥೆ ಒಂದಲ್ಲ ಒಂದು ಕಾರಣದಿಂದ ಎದುರಾಗುತ್ತಿರುವ ಸಮಸ್ಯೆಯಿಂದ ಎರಡೂ ತಾಲ್ಲೂಕುಗಳ ಹಳ್ಳಿಗಳ ಜನರಿಗೆ ನದಿ ಮೂಲದ ನೀರು ಕುಡಿಯುವ ಕನಸು ಇನ್ನೂ ಮರೀಚಿಕೆಯಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಒಡೆಯುವ ಕೊಳವೆ: ಇಳಕಲ್ ಮತ್ತು ಹುನಗುಂದ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ 900 ಮಿ.ಮೀ ವ್ಯಾಸದ ಕಬ್ಬಿಣದ (ಎಂಎಸ್) ಕೊಳವೆ ಮಾರ್ಗದಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಾಗಿ ಕೊಳವೆ ಒಡೆಯುತ್ತಿದೆ. ಕಳೆದ ಐದು ದಿನಗಳ ಹಿಂದೆ ಹುನಗುಂದ ತಾಲ್ಲೂಕಿನ ನಿಡಸನೂರು ಸೀಮಾಂತರದ ಮಲಗಿಹಾಳ-ಕರಡಿ ರಸ್ತೆಯಲ್ಲಿ ಕೊಳವೆ ಒಡೆದು ನೀರು ಸರಬರಾಜು ಸ್ಥಗಿತಗೊಂಡಿದೆ. ತಿಂಗಳಲ್ಲಿ ಸರಾಸರಿ ಒಂದು ಬಾರಿಯಾದರೂ ಕೊಳವೆಯಲ್ಲಿ ಸೋರಿಕೆಯಾಗುತ್ತಿದ್ದು, ಅದು ದುರಸ್ತಿಯಾಗುವುದರೊಳಗೆ ನಾಲ್ಕೈದು ದಿನ ಕಳೆಯುತ್ತದೆ. ಅಲ್ಲಿಯವರೆಗೂ ಈ ತಾಲ್ಲೂಕುಗಳಿಗೆ ನೀರು ಬರುವುದಿಲ್ಲ.
ರೈತರ ತಕರಾರು: ಈ ಮಧ್ಯೆ ಕೊಳವೆಗಳು ಹಾದು ಬಂದಿರುವ ಬಹುತೇಕ ಪ್ರದೇಶ ರೈತರ ಕೃಷಿ ಜಮೀನುಗಳಾಗಿದ್ದು, ನೀರು ಸೋರಿಕೆಯಿಂದ ಹೊಲಗಳು ಮತ್ತು ಬೆಳೆಗಳು ಹಾಳಾಗುತ್ತಿವೆ ಎಂದು ಅಲ್ಲಿಯ ಜನರು ಆಕ್ರೋಶಗೊಂಡು ಕೊಳವೆ ದುರಸ್ತಿಗೆ ಅಡ್ಡಿಪಡಿಸುತ್ತಿರುವುದು ತಿಳಿದುಬಂದಿದೆ.
ಯೋಜನೆಯನ್ನು ನಿರ್ವಹಿಸುತ್ತಿರುವ ಎಲ್ ಅಂಡ್ ಕಂಪನಿ ಸಿಬ್ಬಂದಿ ಹಾಗೂ ಕೆಲಸಗಾರರೊಂದಿಗೆ ಜಗಳಕ್ಕಿಳಿಯುವುದು ಸಾಮಾನ್ಯ. ಭಾನುವಾರ (ಜು.6) ದುರಸ್ತಿಗೆ ತೆರಳಿದ್ದ ಎಂಜಿನಿಯರರೊಂದಿಗೆ ವಾಗ್ವಾದಕ್ಕಿಳಿದು ಕೆಲಸಗಾರರ ಮೇಲೆ ಕೆಲವರು ಹಲ್ಲೆ ನಡೆಸಿರುವುದು ಗೊತ್ತಾಗಿದೆ. ಹಾಗಾಗಿ ಕೆಲಸ ಕೈಬಿಟ್ಟು ಬಂದಿದ್ದಾರೆ. ಪೈಪ್‌ನಲ್ಲಿನ ನೀರು ಹೊರಹಾಕುವುದಕ್ಕೇ ಎರಡು ಮೂರು ದಿನ ಬೇಕಾಗುತ್ತದೆ. ಖಾಲಿಯಾದ ನಂತರ ಬೆಸೆಯುವ (ವೆಲ್ಡಿಂಗ್) ಮಾಡಬೇಕು. ಆದರೆ ರೈತರಿಂದ ಪದೇ ಪದೇ ಅಡ್ಡಿ ಉಂಟಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹುನಗುಂದ ಇಳಕಲ್ ಭಾಗದ ಜನರೇ ಕೊಳವೆ ವಾಲ್ವ್‌ಗಳಿಗೆ ಧಕ್ಕೆ ಮಾಡುತ್ತಿದ್ದಾರೆ. ಈ ಬಗ್ಗೆ ಅಲ್ಲಿಯ ಶಾಸಕರು ಮತ್ತು ಇಲ್ಲಿಯ ಎಂಜಿನಿಯರ್‌ಗಳ ಸಮ್ಮುಖದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆದೊಡ್ಡನಗೌಡ ಪಾಟೀಲ ಕುಷ್ಟಗಿ ಶಾಸಕ
ಜನರ ಹಿತಕ್ಕಾಗದ ಸಚಿವ ಶಾಸಕರು
ಕೃಷ್ಣಾ ನದಿಯಿಂದ ಬರುವ ನೀರಿನ ಕೊಳವೆಗಳು ಬಾಗಲಕೋಟೆ ಜಿಲ್ಲೆಯ ಹುನಗುಂದ ಇಳಕಲ್ ತಾಲ್ಲೂಕುಗಳ ವ್ಯಾಪ್ತಿಯಲ್ಲಿದ್ದು ದುರಸ್ತಿಗೆ ಬರುತ್ತಿರುವುದು ಒಂದು ಕಡೆಯಾದರೆ ಅಲ್ಲಿಯ ಕೆಲವು ರೈತರೇ ವಾಲ್ವ್‌ಗಳನ್ನು ಒಡೆದು ಹಾಕುತ್ತಿದ್ದಾರೆ. ಈ ಹಿಂದೆ ವಾಲ್ವ್ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಡಲು ಹೋದರೆ ಇಳಕಲ್ ಹುನುಗಂದ ಠಾಣೆ ಪೊಲೀಸರು ದೂರು ಸ್ವೀಕರಿಸಿಲ್ಲ. ಘಟನೆಗೆ ಕಾರಣರಾದವರು ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲಿಗರಾಗಿರುವುದರಿಂದ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರಿಗೂ ರಾಜಕಾರಣ ಅಡ್ಡಿಯಾಗುತ್ತದೆ. ಇಂಥ ಸಮಸ್ಯೆ ಎದುರಾಗಿರುವುದು ಗೊತ್ತಾದರೂ ಜಿಲ್ಲೆಯ ಅಧಿಕಾರಿಗಳು ಉಸ್ತುವಾರಿ ಸಚಿವರು ಮತ್ತು ಶಾಸಕರುಗಳೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂಥ ಪ್ರತಿನಿಧಿಗಳು ಅಧಿಕಾರಗಳು ಇದ್ದರೇನು ಪ್ರಯೋಜನ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಆರೋಪಿಸಿದರು.
ಕರೆ ಸ್ವೀಕರಿಸದವರು
ಎರಡೂ ತಾಲ್ಲೂಕುಗಳ ಜನ ನೀರಿಗಾಗಿ ಪರಿತಪಿಸುತ್ತಿದ್ದರೆ ಜಿಲ್ಲೆಯ ಅಧಿಕಾರಿಗಳು ನಿರಾಳರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿಗಾಗಿ ‘ಪ್ರಜಾವಾಣಿ’ ಸಂಪರ್ಕಿಸಿದರೆ ಜಿ.ಪಂ ಸಿಇಒ ಆರ್‌ಡಬ್ಲೂಎಸ್ ಕೊಪ್ಪಳ ವಿಭಾಗದ ಇಇ ಕುಷ್ಟಗಿ ಉಪ ವಿಭಾಗದ ಎಇಇ ತಾ.ಪಂ ಇಒ ಎಲ್ ಅಂಡ್ ಟಿ ಯೋಜನಾ ವ್ಯವಸ್ಥಾಪಕ ಹೀಗೆ ಒಬ್ಬರೂ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.