ADVERTISEMENT

ಕಾರ್ಖಾನೆಗಳ ಮಾಲಿನ್ಯ: ಜಿಲ್ಲಾಕೇಂದ್ರ ಇಂದು ಬಂದ್‌

ವಿವಿಧ ಸಂಘಟನೆಗಳ ಬೆಂಬಲ, ವರ್ಷದ ಹಿಂದೆಯೂ ಬಂದ್‌ ಆಗಿತ್ತು ಕೊಪ್ಪಳ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:11 IST
Last Updated 24 ಫೆಬ್ರುವರಿ 2026, 7:11 IST
ಬಲ್ಡೋಟಾ ಕಂಪನಿಯಿಂದ ಕೊಪ್ಪಳದಲ್ಲಿ ವಿವಿಧೆಡೆ ಹಾಕಲಾಗಿರುವ ಬೆಂಚ್‌ಗಳನ್ನು ಹೋರಾಟಗಾರರು ಸೋಮವಾರ ಕಿತ್ತು ಹಾಕಿದರು
ಬಲ್ಡೋಟಾ ಕಂಪನಿಯಿಂದ ಕೊಪ್ಪಳದಲ್ಲಿ ವಿವಿಧೆಡೆ ಹಾಕಲಾಗಿರುವ ಬೆಂಚ್‌ಗಳನ್ನು ಹೋರಾಟಗಾರರು ಸೋಮವಾರ ಕಿತ್ತು ಹಾಕಿದರು   

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾವೇದಿಕೆ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಬಂದ್‌ ಕರೆ ನೀಡಿವೆ.

ಬೆಳಿಗ್ಗೆ 7 ಗಂಟೆಗೆ ನಗರದಲ್ಲಿ ಬೈಕ್‌ ರ್‍ಯಾಲಿ ನಡೆಯಲಿದ್ದು, ಬಂದವರಿಗೆ ಗವಿಮಠದಿಂದ ದಾಸೋಹವ ವ್ಯವಸ್ಥೆ ಕಲ್ಪಿಸಲಾಗಿದೆ. ಬಂದ್‌ ಯಶಸ್ವಿಯಾಗಿಸಲು ಸಂಘಟಕರು ಈಗಾಗಲೇ ವಿವಿಧೆಡೆ ಸರಣಿ ಸಭೆಗಳನ್ನು ನಡೆಸಿದ್ದು ಅನೇಕ ಸಂಘಟನೆಗಳು ಬೆಂಬಲ ನೀಡಿವೆ.

ಕಾರ್ಖಾನೆಗಳ ವ್ಯಾಪಕ ಮಾಲಿನ್ಯದಿಂದ ತಾಲ್ಲೂಕಿನ ಹಾಲವರ್ತಿ, ಅಲ್ಲಾನಗರ, ಗಿಣಿಗೇರಿ, ಬೇವಿನಹಳ್ಳಿ, ಹಿರೇಬಗನಾಳ, ಕುಣಿಕೇರಿ, ಹಿರೇಕಾಸನಕಂಡಿ, ಬೆಳವಿನಾಳ ಹೀಗೆ ಅನೇಕ ಗ್ರಾಮಗಳ ಜನರ ಬದುಕು ದುರ್ಬರವಾಗಿದೆ. ಅಲ್ಲಿರುವ ನೂರಾರು ಕಾರ್ಖಾನೆಗಳ ಕಪ್ಪುಮಿಶ್ರಿತ ದೂಳು ಜನರ ಜೀವನ, ಕೃಷಿ ಚಟುವಟಿಕೆ ಮೇಲೂ ವ್ಯಾಪಕ ಪರಿಣಾಮಬೀರಿದೆ. ನಟ ದುನಿಯಾ ವಿಜಯ್‌, ರಾಜ್ಯದ ವಿವಿಧ ಸ್ವಾಮೀಜಿಗಳು ಹಾಗೂ ಹೋರಾಟಗಾರರು ಜಿಲ್ಲಾಕೇಂದ್ರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ADVERTISEMENT

ಈಗಿರುವ ಕಾರ್ಖಾನೆಗಳ ಮಾಲಿನ್ಯ ಒಂದೆಡೆಯಾದರೆ ಹೊಸದಾಗಿ ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸ್ಇಂಡಿಯಾ, ಭದ್ರಶ್ರೀ ಸ್ಟೀಲ್, ತನುಷ್, ವನ್ಯಾ ಸ್ಟೀಲ್ ವಿಸ್ತರಣೆಗೆ ಮುಂದಾಗಿದ್ದು ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದೆಲ್ಲವನ್ನೂ ವಿರೋಧಿಸಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುಂದಾಳತ್ವದಲ್ಲಿ ಕಳೆದ ವರ್ಷದ ಫೆ. 24ರಂದು ಕೊಪ್ಪಳ ಬಂದ್ ಮಾಡಲಾಗಿತ್ತು.

ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಸೋಮವಾರ 116 ದಿನಗಳನ್ನು ಪೂರ್ಣಗೊಳಿಸಿದ್ದು ಕಳೆದ ವರ್ಷದ ಕೊಪ್ಪಳ ಬಂದ್‌ ಅಂಗವಾಗಿ ಈ ವರ್ಷವೂ ಬಂದ್‌ ಕರೆ ನೀಡಲಾಗಿದೆ. ಸೋಮವಾರದ ಧರಣಿಗೆ ಶಂಕರಮಠ ಯುವಕ ಸಂಘ ಬೆಂಬಲ ವ್ಯಕ್ತಪಡಿಸಿತು.

ಅಭಿಯಾನಕ್ಕೆ ಚಾಲನೆ: ಮಳೆಮಲ್ಲೇಶ್ವರ ದೇವಸ್ಥಾನದಿಂದ ಬಲ್ಡೋಟ ಕೊಟ್ಟ ಬೆಂಚ್ ಹಾಗೂ ಟ್ರೀ ಗಾರ್ಡ್ ಕಿತ್ತು ಮರಳಿಸುವ ಕಾರ್ಯಕ್ಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಧರಣಿಯಲ್ಲಿ ಸಾಹಿತಿ ಸಾವಿತ್ರಿ ಮುಜಮದಾರ, ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಸೌಮ್ಯ ನಾಲ್ವಾಡ, ಶ್ವೇತಾ ಅಕ್ಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶಾಂತಿಯುತವಾಗಿ ಬಂದ್ ಆಚರಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ನಗರದ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮಾಡಬೇಕು.
ಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ

ಕೊಪ್ಪಳ ಬಂದ್‌: ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

ಕೊಪ್ಪಳ: ಕೊಪ್ಪಳ ಬಂದ್‌ ನಡೆಯಲಿರುವ ಕಾರಣ ಮಂಗಳವಾರ ನಿಗದಿಯಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ತರಗತಿಗಳ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಂದೂಡಲಾಗಿದೆ. ವಾಣಿಜ್ಯ ಅರ್ಥಶಾಸ್ತ್ರ ಇಂಗ್ಲಿಷ್‌ ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕನ್ನಡ ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗಗಳ ಪರೀಕ್ಷೆಯನ್ನು ಫೆ. 24ರ ಬದಲಾಗಿ 26ರಂದು ಮರುನಿಗದಿ ಮಾಡಲಾಗಿದೆ ಎಂದು ವಿ.ವಿ.ಪ್ರಕಟಣೆ ತಿಳಿಸಿದೆ. ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವು ಜಿಲ್ಲಾಕೇಂದ್ರದ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಇರುವ ಕಾರಣ ಎಸ್‌ಎಸ್‌ಎಲ್‌ಸಿ ಹೊರತುಪಡಿಸಿ ಉಳಿದವರು ಇದು ಅನ್ವಯವಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ತಳಕಲ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.