ಕುಷ್ಟಗಿ: ಸರ್ಕಾರ ಪ್ರತಿವರ್ಷ ಇಲ್ಲಿನ ವಸತಿ ಶಾಲೆಯ ಮಕ್ಕಳಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಗುಣಮಟ್ಟದ ಊಟಕ್ಕೂ ಪರದಾಡಬೇಕಾಗಿದೆ. ಮಕ್ಕಳ ಹೊಟ್ಟೆ ಮಾತ್ರ ತುಂಬುತ್ತಿಲ್ಲ. ತುಟಿಬಿಚ್ಚಿದರೆ ವಾರ್ಡನ್ ಗದರಿಸುತ್ತಾರೆ.
‘ವಸತಿ ಶಾಲೆಯಿಂದ ಹೊರಗೆ ಹಾಕಿದರೆ’ ಎಂಬ ಹೆದರಿಕೆಯಿಂದಾಗಿ ಸಮಸ್ಯೆ ಬಗ್ಗೆ ಯಾರ ಮುಂದೆ ಹೇಳಿಕೊಳ್ಳುವಂತೆಯೂ ಇಲ್ಲ; ಅನುಭವಿಸಲೂ ಆಗುತ್ತಿಲ್ಲ. ‘ಕಳಪೆ ಊಟ’ದ ಭಾಗ್ಯದ ಕರುಣಾಜನಕ ಕಥೆಯನ್ನು ಮಕ್ಕಳ ಕಣ್ಣುಗಳೇ ಹೇಳುತ್ತಿವೆ.
ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಗುಣಮಟ್ಟದ ಊಟ ಸಿಗದೇ ನಿತ್ಯ ಅನುಭವಿಸುವ ನೋವಿನ ಸಂಗತಿ ಇದು. ಇಲ್ಲಿನ ಇಡೀ ವ್ಯವಸ್ಥೆ ವಾರ್ಡನ್ ಮೇಲೆ ನಿಂತಿದೆ. ಅಧಿಕಾರವಿದ್ದರೂ ಇಲ್ಲಿ ಪ್ರಾಚಾರ್ಯರು ಅಸಹಾಯಕರು. ವಾರ್ಡನ್ ಹೇಳಿದಂತೆ, ಕೊಟ್ಟಷ್ಟು ಆಹಾರ ಪದಾರ್ಥಗಳಲ್ಲೇ ಅಡುಗೆ ಸಿಬ್ಬಂದಿ ಆಹಾರ ಬೇಯಿಸಬೇಕಾದ ಪರಿಸ್ಥಿತಿ ಇದೆ.
ಮಕ್ಕಳು ಊಟ ಮಾಡದಿದ್ದರೆ ಅಡುಗೆಯವರನ್ನೇ ಹೊಣೆ ಮಾಡಲಾಗುತ್ತಿದೆ. ಐದು ವರ್ಷಗಳಿಂದ ಈ ಸಮಸ್ಯೆಯಿದ್ದರೂ ಮೇಲಧಿಕಾರಿಗಳು ಗಮನಹರಿಸಿಲ್ಲ. ವಾರ್ಡನ್ ಧೋರಣೆಯಿಂದ ಬೇಸತ್ತ ಅಡುಗೆ ಸಿಬ್ಬಂದಿ ಗುರುವಾರ ಅಡುಗೆ ಮಾಡದೇ ಪ್ರತಿಭಟಿಸಿದ್ದು ಅಲ್ಪಸಂಖ್ಯಾರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ‘ಬಿಸಿ’ ಮುಟ್ಟಿಸಿತು.
ಆಗಿದ್ದೇನು?: 6ರಿಂದ 10ನೇ ತರಗತಿವರೆಗಿನ ಈ ವಸತಿ ಶಾಲೆಯಲ್ಲಿ 271 ಮಕ್ಕಳಿದ್ದಾರೆ. ಚಹಾ, ಮೊಸರು, ಮಜ್ಜಿಗೆ ಎಲ್ಲವನ್ನೂ 3–4 ಲೀಟರ್ ಹಾಲಿನಲ್ಲಿ ಮಾಡಬೇಕು. ಅಷ್ಟೂ ಮಕ್ಕಳ ಉಪಾಹಾರಕ್ಕೆ ಒಂದೆರಡು ಕೇಜಿ ತರಕಾರಿ, ಅರ್ಧ ಲೀಟರ್ ಎಣ್ಣೆ, ಒಂದು ಲೀಟರ್ ಖಾದ್ಯತೈಲದಲ್ಲಿ ಮಧ್ಯಾಹ್ನ ಮತ್ತು ರಾತ್ರಿಗೆ ಸಾಂಬಾರ್ ಮಾಡಬೇಕು. ಮಾರುಕಟ್ಟೆಯಲ್ಲಿ ಯಾರೂ ಕೇಳದ ಒಂದು ಕೆ.ಜಿ. ಹುಳುಬಿದ್ದ ಕಳಪೆ ಸೌತೆ, ಬದನೆಕಾಯಿ ನೀಡಲಾಗುತ್ತಿದೆ. ಜೊಂಡುಗಟ್ಟಿದ, ಅಲ್ಪ ಪ್ರಮಾಣದ ಖಾರದಪುಡಿ, ಬಂಡಾರಕ್ಕೆ ಬಳಸುವ ನಾಲ್ಕೈದು ಚೀಟು ಅರಿಸಿನಪುಡಿ ಕೊಡಲಾಗುತ್ತಿದೆ. ಇದರಿಂದ ಬೇಸತ್ತು ಅಡುಗೆ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಸರ್ಕಾರ ಉದಾರವಾಗಿ ಅನುದಾನ ನೀಡುತ್ತಿದ್ದರೂ ಇಲ್ಲಿನ ಮಕ್ಕಳಿಗೆ ಮಾತ್ರ ಆಹಾರದಲ್ಲಿ ಬಡತನ. ನೀರೇ ಇಲ್ಲಿ ಸಾಂಬರ್. ಕೊಳೆತ ಮೊಟ್ಟೆಗಳ ಸರಬರಾಜಾಗುತ್ತಿವೆ. ಸರ್ಕಾರ ಪ್ರತಿ ಮಗುವಿಗೆ ತಿಂಗಳಿಗೆ ₹1,850 ಅನುದಾನ ಕೊಡುತ್ತಿದ್ದರೂ ಗುಣಮಟ್ಟದ ಆಹಾರದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಲಕ್ಷಾಂತರ ರೂಪಾಯಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ವಸತಿ ಶಾಲೆಗೆ ಬಂದಾಗ ಕೇಳಿಬಂದವು.
ಮಕ್ಕಳಿಗೆ ಉತ್ತಮ ಆಹಾರ ಸಿಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಸಭೆ ಕರೆದು ಪರಿಶೀಲಿಸುತ್ತೇನೆದೊಡ್ಡನಗೌಡ ಪಾಟೀಲ ಶಾಸಕ
ಕಡಿಮೆ ಪ್ರಮಾಣದ ಆಹಾರ ಸಾಮಗ್ರಿ ನೀಡುತ್ತಿರುವ ಮಾಹಿತಿ ಬಂದಿದೆ. ವಾರ್ಡನ್ ಕರ್ತವ್ಯಲೋಪ ಎಸಗಿದ್ದು ಕಂಡುಬಂದಿದೆ. ನೋಟಿಸ್ ನೀಡಿ ಕ್ರಮ ಜರುಗಿಸುತ್ತೇವೆಅಜ್ಮೀರ್ ಅಲಿ ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ನಮ್ಮ ಹಂತದಲ್ಲಿ ತಿಳಿ ಹೇಳಿದರೂ ವಾರ್ಡನ್ ಮಾತು ಕೇಳುತ್ತಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.ಗೌಸ್ ಪೀರ್ ಪ್ರಾಚಾರ್ಯ ಮೊರಾರ್ಜಿ ವಸತಿ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.