ADVERTISEMENT

ಕುಷ್ಟಗಿ | ಕೋಳಿಫಾರಂ ತೆರವು: ಎಚ್ಚರಿಕೆ

ನೊಣ ಹಾವಳಿ ಇರುವ ಗ್ರಾಮಗಳಿಗೆ ಉಪವಿಭಾಗಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 3:01 IST
Last Updated 18 ಜೂನ್ 2020, 3:01 IST
ಕುಷ್ಟಗಿ ತಾಲ್ಲೂಕು ಕಡೆಕೊಪ್ಪ ಬಳಿ ಕೋಳಿಫಾರಂ ಗೆ ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಬುಧವಾರ ಭೇಟಿ ನೀಡಿದ್ದರು
ಕುಷ್ಟಗಿ ತಾಲ್ಲೂಕು ಕಡೆಕೊಪ್ಪ ಬಳಿ ಕೋಳಿಫಾರಂ ಗೆ ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಬುಧವಾರ ಭೇಟಿ ನೀಡಿದ್ದರು   

ಕುಷ್ಟಗಿ: ‘ಕೋಳಿಫಾರಂ ಸಮರ್ಪಕವಾಗಿ ನಿರ್ವಹಿಸದ ಮತ್ತು ಶುಚಿತ್ವ ಕಾಯ್ದುಕೊಳ್ಳದ ಕಾರಣ ಸುತ್ತಮುತ್ತಲ ಗ್ರಾಮಗಳಲ್ಲಿ ನೊಣಗಳ ಹಾವಳಿ ಹೆಚ್ಚಿದೆ. ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಕೋಳಿಫಾರಂ ತೆರವಿಗೆ ಶಿಫಾರಸು ಮಾಡಲಾಗುವುದು’ ಎಂದು ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಕೋಳಿಫಾರಂ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಡೆಕೊಪ್ಪ, ತಾಂಡಾ ಮತ್ತಿತರ ಗ್ರಾಮಗಳಲ್ಲಿ ನೊಣಗಳ ಸಂಖ್ಯೆ ವಿಪರೀತವಾಗಿದ್ದು ಅನಾರೋಗ್ಯಕ್ಕೀ ಡಾಗುತ್ತಿರುವ ಬಗ್ಗೆ ಅಲ್ಲಿಯ ನಿವಾಸಿಗಳು ದೂರು ಸಲ್ಲಿಸಿದ ಕಾರಣ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಅವರು, ‘ಕೋಳಿ ಫಾರಂ ಆವರಣವನ್ನು ಶುಚಿಯಾಗಿ ಇಟ್ಟುಕೊಳ್ಳುವದತ್ತ ವಿಶೇಷ ಗಮನ ನೀಡಬೇಕು’ ಎಂದು ಮಾಣಿಕ್ಯಂ ಕೋಳಿಫಾರಂ ಮಾಲೀಕರಿಗೆ ತಾಕೀತು ಮಾಡಿದರು.

‘ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರೆದಿದೆ. ಹಗಲುರಾತ್ರಿ ಸಹಿತ ನೊಣಗಳ ಕಾಟದಿಂದ ಊರು ಬಿಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಊಟ ಮಾಡುವುದಕ್ಕೂ ಬಿಡುವುದಿಲ್ಲ. ಪಾತ್ರ, ಆಹಾರ ಇತರೆ ವಸ್ತುಗಳು ಕಾಣದಂತೆ ನೊಣಗಳು ಮುತ್ತಿಕೊಂಡಿರುತ್ತವೆ. ಮಕ್ಕಳ ಮೈಮೇಲೂ ನೂರಾರು ನೊಣ ಕುಳಿತಿರುತ್ತವೆ. ಇಲ್ಲಿಯ ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ’ ಎಂದು ಜನರು ನೊಂದು ನುಡಿದರು.

ADVERTISEMENT

‘ಕೋಳಿಫಾರಂನಿಂದಲೇ ಇಷ್ಟೆಲ್ಲ ಸಮಸ್ಯೆ ಉಂಟಾಗಿದೆ. ಕೆಲ ಪ್ರಭಾವಿ ವ್ಯಕ್ತಿಗಳು ಶಾಮೀಲು ಆಗಿರುವುದರಿಂದ ಕೋಳಿಫಾರಂ ಮಾಲೀಕರ ಮೇಲೆ ಯಾರೂ ಕ್ರಮ ಜರುಗಿಸುತ್ತಿಲ್ಲ. ಜನರು ಸಿಟ್ಟಿಗೆದ್ದಾಗ ಮಾತ್ರ ಕಾಟಾಚಾರಕ್ಕೆ ಕ್ರಿಮಿನಾಶಕ ಸಿಂಪಡಿಸಲಾಗುತ್ತದೆ’ ಎಂದು ಜನರು ಆರೋಪಿಸಿದರು.

‘ಕೋಳಿಫಾರಂನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೋಳಿಫಾರಂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಗ್ರಾಮ, ತಾಂಡಾಗಳಲ್ಲಿ ಪ್ರತಿ ವಾರಕ್ಕೊಮ್ಮೆ ಕ್ರಿಮಿನಾಶಕ, ಔಷಧ ಸಿಂಪಡಿಸಬೇಕು. ಸತ್ತ ಕೋಳಿಗಳನ್ನು ವೈಜ್ಞಾನಿಕ ರೀತಿ ವಿಲೇವಾರಿ ಮಾಡ ಬೇಕು ಎಂದು ಕೋಳಿಫಾರಂ ಸಿಬ್ಬಂದಿಗೆ ಸೂಚಿಸಲಾಯಿತು. ಕೋಳಿಫಾರಂ ಮಾಲೀಕರು ತೆಗೆದುಕೊಂಡ ಸ್ವಚ್ಛತಾ ಕ್ರಮಗಳ ಬಗ್ಗೆ ನಿಗಾವಹಿಸುವಂತೆ ಇತರ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಹಶೀಲ್ದಾರ್ ಎಂ.ಸಿದ್ದೇಶ, ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.