ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ಕುಷ್ಟಗಿ: ನಿರೀಕ್ಷೆಗೂ ಮೀರಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗಾಳಿಯಂತ್ರ, ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚುತ್ತಿದೆ. ಈ ಭಾಗದಲ್ಲಿ ನೀರಾವರಿಗೆ ಕೊಳವೆಬಾವಿ, ಕೃಷಿ ಪಂಪ್‌ಸೆಟ್‌ಗಳೆ ಆಸರೆ. ಸದ್ಯ ಬೇಡಿಕೆಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿರುವುದರಿಂದ ಕೃಷಿಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸಲು ಸಾಧ್ಯವಿದೆಯಲ್ಲವೆ? ಎಂಬ ರೈತರ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.
ವಿದ್ಯುತ್ ಉತ್ಪಾದನೆ ಹೆಚ್ಚಾದರೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ತಲುಪಿಸುವ ಸಾಮರ್ಥ್ಯ ಇಲ್ಲದಂತಾಗಿದೆ. ಈ ಭಾಗದ ರೈತರು ಗಾಳಿ ವಿದ್ಯುತ್ ಉತ್ಪಾದನೆ, ಟವರ್, ಸ್ಟೇಷನ್‌ಗಳ ನಿರ್ಮಾಣಕ್ಕೆ ಭೂಮಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಕತ್ತಲಲ್ಲೇ ತೋಟಕ್ಕೆ ನೀರುಣಿಸುವ ಅನಿವಾರ್ಯ ಬದಲಾಗಿಲ್ಲ ಎನ್ನುವ ಕೊರಗು ರೈತರದ್ದು.
ಕಾರಣ ಏನು: ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವುದಕ್ಕೆ ವಿದ್ಯುತ್ ಪರಿವರ್ತಕಗಳ, ವಿತರಣಾ ಉಪ ಕೇಂದ್ರಗಳು ಹೀಗೆ ಅಗತ್ಯವಿರುವ ಮೂಲಸೌಲಭ್ಯವನ್ನು ಒಳಗೊಂಡ ಸಾಮರ್ಥ್ಯ ಇರಬೇಕು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಸರತಿ ಆಧಾರದ ಮೇಲೆ ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಏಕಕಾಲಕ್ಕೆ ಹಗಲಿನಲ್ಲಿ ಎಲ್ಲ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಿದರೆ ಒತ್ತಡ ನಿಭಾಯಿಸುವ ಶಕ್ತಿ ಉಪ ಕೇಂದ್ರಗಳಿಗಿಲ್ಲ. ಇನ್ನು ಹತ್ತು ತಾಸು ವಿದ್ಯುತ್ ಪೂರೈಸುವುದಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲದೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ಅವಧಿ ಸರ್ಕಾರದ ಮಟ್ಟದಲ್ಲಿ ನಿಗದಿಯಾಗುತ್ತದೆ. ಯೂನಿಟ್ ಆಧಾರದ ಮೇಲೆ ಆಯಾ ಉಪ ವಿಭಾಗಗಳಿಗೆ ರಾಜ್ಯದ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎಲ್‌ಡಿಸಿ) ನೋಡಿಕೊಳ್ಳುತ್ತದೆ ಎನ್ನುತ್ತವೆ ಜೆಸ್ಕಾಂ ಮೂಲಗಳು. ಸದ್ಯದ ಸ್ಟೇಷನ್‌ಗಳ ಸಾಮರ್ಥ್ಯ ಹೆಚ್ಚಿಸುವುದು, 33 ಕೆವಿ ವಿದ್ಯುತ್ ಉಪ ಕೇಂದ್ರಗಳ ಸಂಖ್ಯೆ ಹೆಚ್ಚಳ ಹೀಗೆ ವ್ಯವಸ್ಥೆ ಉನ್ನತೀಕರಣ ಆಗಬೇಕಿದೆ.
ಲೆಕ್ಕಕ್ಕಿಲ್ಲದ್ದೇ ಸಮಸ್ಯೆ: ಜೆಸ್ಕಾಂ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ 13,210 ಕೃಷಿಪಂಪ್‌ಸೆಟ್‌ಗಳಿವೆ. ಅಧಿಕೃತ ಪಂಪ್‌ಸೆಟ್‌ಗಳ ಮಾನದಂಡದ ಆಧಾರದ ಮೇಲೆ ಉಪ ವಿಭಾಗಕ್ಕೆ ಇಂತಿಷ್ಟು ಯೂನಿಟ್ ವಿದ್ಯುತ್ ಎಂದು ನಿಗದಿಪಡಿಸಲಾಗಿರುತ್ತದೆ. ಆದರೆ ದಾಖಲೆಯಲ್ಲಿಲ್ಲದ ಅನಧಿಕೃತ ಪಂಪ್‌ಸೆಟ್‌ಗಳು ಬಹಳಷ್ಟಿದ್ದರೂ ವಿತರಣಾ ವ್ಯವಸ್ಥೆ ಮೇಲೆ ಭಾರ ಬೀಳುತ್ತಿದೆ.
ಹೀಗಿದೆ ರೈತರ ಸಮಸ್ಯೆ: ಸದ್ಯದ ವಿದ್ಯುತ್ ವಿತರಣಾ ವ್ಯವಸ್ಥೆ ಪ್ರಕಾರ ಒಂದು ಪಾಳಿಯಲ್ಲಿ ಬೆಳಗಿನ ಜಾವ 4ರಿಂದ 11 ಗಂಟೆಯವರೆಗೆ ಇನ್ನೊಂದು ಪಾಳಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಬೆಳಗಿನ ಜಾವ 3 ಗಂಟೆಗೆ ಎದ್ದು ಕತ್ತಲಲ್ಲೇ ವಿಷಜಂತುಗಳು ಇರುವುದನ್ನು ಲೆಕ್ಕಿಸದೆ ಜೀವಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಈ ಸಮಸ್ಯೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಈ ಭಾಗದ ಸಂಸದರು, ಸಚಿವರು, ಶಾಸಕರು ವಿಫಲರಾಗಿದ್ದಾರೆ ಎಂಬ ಅಸಮಾಧಾನ ರೈತರದ್ದು.
‘ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಕುರಿತು ರೈತರ ಮನವಿಗೆ ಅನುಗುಣವಾಗಿ ಜೆಸ್ಕಾಂ ದಿಂದ ಬೇಡಿಕೆ ಬಂದಿದ್ದು ಇಲಾಖೆ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ಕೆಪಿಟಿಸಿಎಲ್ ಮುತುವರ್ಜಿ ವಹಿಸಿದೆ’ ಎಂದು 220 ಕೆ.ವಿ. ನೋಡಲ್ ಅಧಿಕಾರಿಯಾಗಿರುವ ಎಇಇ ಟಿ.ಎಂ.ಜಂಬುನಾಥ್ ಹೇಳುತ್ತಾರೆ.
ಕುಷ್ಟಗಿ ಉಪ ವಿಭಾಗಕ್ಕೆ ನಾಲ್ಕು 110 ಕೆವಿ ಸಾಮರ್ಥ್ಯದ ವಿತರಣಾ ಕೇಂದ್ರಗಳ ಸ್ಥಾಪನೆಗೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಮಂಜೂರಾತಿ ದೊರೆತಿದ್ದು ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆಕೆಂಚಪ್ಪ ಭಾವಿಮನಿ ಎಇಇ ಜೆಸ್ಕಾಂ ಉಪವಿಭಾಗ
ವಿದ್ಯುತ್ ಉತ್ಪಾದನೆ ಹೆಚ್ಚಾಗಿರವುದರಿಂದ ಈಗಲಾದರೂ ಹಗಲಿನಲ್ಲಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕುಶರಣಗೌಡ ಪಾಟೀಲ ತಳುವಗೇರಾ ಗ್ರಾಮದ ರೈತ
ಹಗಲಿನಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಬೇಡಿಕೆ ಸರಿಯಾಗಿದೆ. ಈ ಬಗ್ಗೆ ಜೆಸ್ಕಾಂ ಎಂ.ಡಿ ಜೊತೆ ಚರ್ಚಿಸಿ ನಂತರ ಸರ್ಕಾರದ ಗಮನ ಸೆಳೆಯುತ್ತೇನೆದೊಡ್ಡನಗೌಡ ಪಾಟೀಲ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ
ಕುಷ್ಟಗಿಯಲ್ಲಿ ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ 220 ಕೆವಿ ವಿತರಣಾ ಕೇಂದ್ರವಿದ್ದು 100 ಮೆಗಾವ್ಯಾಟ್ ಸಾಮರ್ಥ್ಯದ 3 ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರ ವ್ಯಾಪ್ತಿಯಲ್ಲಿರುವ ಪರಿವರ್ತಕಗಳ ಸಾಮರ್ಥ್ಯ ಹೆಚ್ಚಿಸುವುದು ಹೆಚ್ಚುವರಿ ಪರಿವರ್ತಗಳ ಅಳವಡಿಕೆ ಉದ್ದೇಶ ಇದ್ದು ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಕೆಪಿಟಿಸಿಎಲ್ ಮಂಜೂರಾತಿ ನೀಡಿ ಟೆಂಡರ್ ಪ್ರಕ್ರಿಯೆ ನಡೆಸಿದರೂ ಬಿಡ್‌ದಾರರು ಬಂದಿಲ್ಲ. ಲಭ್ಯವಿರುವ ಪರಿವರ್ತಕಗಳನ್ನೇ ಅಗತ್ಯವಿರುವಲ್ಲಿ ಬದಲಾಯಿಸುವುದು ಬೇರೆ ಕಡೆ ಇರುವ ಹೆಚ್ಚಿನ ಸಾಮರ್ಥ್ಯದ ಪರಿವರ್ತಕ ತರಿಸಿಕೊಂಡು ವ್ಯವಸ್ಥೆ ಸರಿದೂಗಿಸುವುದಕ್ಕೆ ಸೂಚನೆ ಇದೆ. ಆದರೆ ತಾವೇ ಹೊಸದಾಗಿ ಪರಿವರ್ತಕಗಳನ್ನು ಸರಬರಾಜು ಮಾಡುವುದಿದ್ದರೆ ಮಾತ್ರ ಬಿಡ್‌ದಾರರು ಮುಂದೆ ಬರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ತಾಲ್ಲೂಕಿನಲ್ಲಿರುವ ಖಾಸಗಿ ವಲಯದಿಂದ ಗಾಳಿ ಇರುವಾಗ ಸುಮಾರು 400 ಮೆವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ತಾಲ್ಲೂಕಿನ ಕ್ಯಾದಿಗುಪ್ಪಾ ಕೈಗಾರಿಕಾ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ 400 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ಭವಿಷ್ಯದಲ್ಲಿ ಕುಷ್ಟಗಿ ಹೆಚ್ಚು ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯಲ್ಲಿ ಪವರ್ ಹಬ್ ಆಗಿ ಪರಿವರ್ತನೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತವೆ ಕೆಪಿಟಿಸಿಎಲ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.