
ಕಾರಟಗಿ: ತುಂಗಭದ್ರಾ ಜಲಾಶಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಲಾಶಯ ಲಕ್ಷಾಂತರ ಜೀವಿಗಳಿಗೆ ಆಸರೆಯಾಗಲಿದೆ. ತುಂಗಭದ್ರಾ ಜಲಾಶಯದ ಉಳಿವಿಗೆ ನಡೆಯುತ್ತಿರುವ ‘ನಿರ್ಮಲ ತುಂಗಭದ್ರಾ’ ಅಭಿಯಾನಕ್ಕೆ ಕೈಜೋಡಿಸಿ, ಪಾಲ್ಗೊಳ್ಳಬೇಕು ಎಂದು ಅಭಿಯಾನದ ತಾಲ್ಲೂಕು ಸಂಚಾಲಕ ಪ್ರಭು ಉಪನಾಳ ಹೇಳಿದರು.
ಪಟ್ಟಣಕ್ಕೆ ಗುರುವಾರ ಆಗಮಿಸಿದ್ದ ‘ನಿರ್ಮಲ ತುಂಗಭದ್ರಾ ಅಭಿಯಾನ’ದ ಜನ ಜಾಗೃತಿ ರಥಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣಕ್ಕೆ ಮತ್ತೆ ಡಿ.27ರಂದು ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಕುರಿತ ಪೂರ್ವಭಾವಿ ಜನ ಜಾಗೃತಿ ರಥಯಾತ್ರೆ ಆಗಮಿಸಲಿದೆ. ಡಿ.28 ರಂದು ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಾರ್ವಜನಿಕ ಜಾಗೃತಿ ಸಭೆ ನಡೆಯಲಿದೆ. ನದಿಯ ಮೌಲ್ಯ ಹಾಗೂ ಸಂರಕ್ಷಣೆಯ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಜವಾಬ್ದಾರಿ ರಥಯಾತ್ರೆಯದ್ದಾಗಿದೆ. ಅಭಿಯಾನಕ್ಕೆ ಎಲ್ಲರೂ ಸಂಘಟಿತರಾಗಿ ಕೈಜೋಡಿಸಬೇಕಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಮಾತನಾಡಿ, ‘ಸಾರ್ವಜನಿಕ ಸಂಪತ್ತುಗಳನ್ನು ಸಂರಕ್ಷಿಸುವಲ್ಲಿ ಆಡಳಿತ ವರ್ಗಗಳ ಜೊತೆಗೆ ಸಮುದಾಯದ ಸಹಭಾಗಿತ್ವವೂ ಮುಖ್ಯ’ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ, ಸದಸ್ಯ ಹಿರೇಬಸಪ್ಪ ಸಜ್ಜನ್, ರಾಜಶೇಖರ ಸಿರಿಗೇರಿ, ನಾಮನಿರ್ದೇಶಿತ ಸದಸ್ಯ ವೀರೇಶ ಮುದಗಲ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಪ್ರಭುರಾಜ ಬೂದಿ, ದೇವರಾಜ ನಾಯಕ, ರಾಜಶೇಖರ ಆನೆಹೊಸೂರು, ಪ್ರಹ್ಲಾದ ಜೋಶಿ, ರುದ್ರೇಶ ಮಂಗಳೂರು, ಅಯ್ಯಪ್ಪ ಉಪ್ಪಾರ, ಶಿವುಸ್ವಾಮಿ, ವೀರೇಶ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.