ADVERTISEMENT

ಎನ್‌ಇಪಿ ಅನ್ವಯ ಕೋರ್ಸ್‌ಗೆ ಆದ್ಯತೆ

ಅಧಿಕಾರ ವಹಿಸಿಕೊಂಡ ಕೊಪ್ಪಳ ವಿಶ್ವವಿದ್ಯಾಲಯದ ಮೊದಲ ಕುಲಪತಿ ಬಿ.ಕೆ. ರವಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 11:05 IST
Last Updated 24 ಮಾರ್ಚ್ 2023, 11:05 IST
ಕೊಪ್ಪಳದ ನೂತನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿ ಅವರನ್ನು ಅಳವಂಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಗವಿಸಿದ್ಧಪ್ಪ ಮುತ್ತಾಳ್ ಸನ್ಮಾನಿಸಿದರು. ಉಪನ್ಯಾಸಕಾರದ ವಿಜಯ ಕುಲಕರ್ಣಿ, ರವಿ ಹಿರೇಮಠ ಇದ್ದರು
ಕೊಪ್ಪಳದ ನೂತನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿ ಅವರನ್ನು ಅಳವಂಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಗವಿಸಿದ್ಧಪ್ಪ ಮುತ್ತಾಳ್ ಸನ್ಮಾನಿಸಿದರು. ಉಪನ್ಯಾಸಕಾರದ ವಿಜಯ ಕುಲಕರ್ಣಿ, ರವಿ ಹಿರೇಮಠ ಇದ್ದರು   

ಕೊಪ್ಪಳ: ‘ನೂತನವಾಗಿ ಆರಂಭವಾದ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಆರಂಭಿಕ ಹಂತದಲ್ಲಿ ಬೇಕಾಗುವ ಮೂಲ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುವುದು’ ಎಂದು ಇಲ್ಲಿನ ವಿ.ವಿ.ಯ ಮೊದಲ ಕುಲಪತಿ ಪ್ರೊ. ಬಿ.ಕೆ. ರವಿ ತಿಳಿಸಿದರು.

ಸದ್ಯ ಕುಕನೂರು ತಾಲ್ಲೂಕಿನ ತಳಕಲ್‌ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆರಂಭವಾಗಿರುವ ವಿ.ವಿ.ಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೊಪ್ಪಳ ವಿ.ವಿ. ಮಹತ್ವದ ಪಾತ್ರ ನಿರ್ವಹಿಸಲಿದೆ. ಎಲ್ಲರಿಗೂ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ಜಿಲ್ಲೆಗೊಂದು ಹೊಸ ವಿ.ವಿ.ಗಳನ್ನು ಸರ್ಕಾರ ಆರಂಭಿಸುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ ಅನುಷ್ಠಾನಕ್ಕೂ ಇದು ಪೂರಕವಾಗಲಿದೆ’ ಎಂದರು.

‘ಹೊಸ ವಿ.ವಿ. ಎಂದ ಮೇಲೆ ಅನೇಕ ಸಮಸ್ಯೆ ಹಾಗೂ ಸವಾಲುಗಳು ಇದ್ದೇ ಇರುತ್ತದೆ. ಜಿಲ್ಲಾ ಕೇಂದ್ರದಿಂದ ಈಗಿನ ವಿ.ವಿ. ದೂರವಿದೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಅಂಶ ಗಮನಕ್ಕೆ ಬಂದಿದೆ. ಅದಕ್ಕಾಗಿ ಚುಕುನಕಲ್‌ ಬಳಿ ನಿರ್ಮಾಣವಾಗುತ್ತಿರುವ ಹೊಸ ಸರ್ಕಾರಿ ಪದವಿ ಕಾಲೇಜು, ಮಳೆಮಲ್ಲೇಶ್ವರ ಬೆಟ್ಟದಲ್ಲಿರುವ ಸರ್ಕಾರಿ ಜಾಗ ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಿದ್ದೇನೆ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಕೊಪ್ಪಳ ವಿ.ವಿ. ಯನ್ನು ಮಾದರಿಯಾಗಿ ರೂಪಿಸುವ ಗುರಿ ಹೊಂದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಕೊಪ್ಪಳ ವಿ.ವಿ. ಅಡಿಯಲ್ಲಿ 40 ಕಾಲೇಜುಗಳು ಬರಲಿದ್ದು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆದ್ಯತೆ ಕೊಡಲಾಗುವುದು. ತಂತ್ರಜ್ಞಾನ ಹಾಗೂ ಉದ್ಯೋಗ ಆಧರಿತ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಈಗಿರುವ ಕೋರ್ಸ್‌ಗಳನ್ನು ಮುಂದುವರಿಸಿಕೊಂಡೇ ಹೆಚ್ಚು ಕೋರ್ಸ್‌ಗಳ ಆರಂಭಿಸಲಾಗುವುದು’ ಎಂದರು.

’ವಿ.ವಿ.ಗೆ ಆಡಳಿತಾತ್ಮಕ ಅಧಿಕಾರಿಗಳ ನೇಮಕ, ಅನುದಾನದ ಬಗ್ಗೆ ಸರ್ಕಾರದ ಜೊತೆ ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಲಾಗುವುದು. ಶೈಕ್ಷಣಿಕವಾಗಿ ಮತ್ತು ಉದ್ಯೋಗಶೀಲ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡುತ್ತೇನೆ. ರಾಷ್ಟ್ರೀಯ ಶಿಕ್ಷಣ ನೀತಿಯ ಆಶೋತ್ತರಗಳಿಗೆ ಪೂರಕವಾಗಿ ನೂತನ ವಿಶ್ವವಿದ್ಯಾಲಯದ ಪಠ್ಯಕ್ರಮ ರಚಿಸಲು ಬದ್ಧ’ ಎಂದರು.

‘ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವುದು, ಹಂತಹಂತವಾಗಿ ವಿಶ್ವವಿದ್ಯಾಲಯದ ಸೌಲಭ್ಯಗಳ ಉನ್ನತೀಕರಣ, ಉತ್ತಮ ಬೋಧನೆ, ಸಂಶೋಧನೆ ಕೇಂದ್ರಿಕೃತ ವಿ.ವಿ. ಮಾಡುವುದು ಮತ್ತು ಎನ್‌ಇಪಿ ಅನ್ವಯ ಬಹುಶಿಸ್ತೀಯ ಮಾದರಿ ಕೋರ್ಸ್‌ ಆರಂಭಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಸನ್ಮಾನ: ನೂತನ ಕುಲಪತಿಯನ್ನು ವಿವಿಧ ಸಂಘ ಸಂಸ್ಥೆಯವರು, ಕಾಲೇಜುಗಳ ಪ್ರಾಚಾರ್ಯರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.