ADVERTISEMENT

ಕೊಪ್ಪಳ: ಗಂಗಾವತಿ ನಗರ, ಶ್ರೀರಾಮನಗರ 10ದಿನ ಲಾಕ್‌ಡೌನ್‌

ಭಾಗ್ಯನಗರ, ಮೇದಾರ ಓಣಿ ಡಿಸಿ ವಿವೇಚನೆಗೆ: ಸಚಿವ ಬಿ.ಸಿ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 14:13 IST
Last Updated 20 ಜುಲೈ 2020, 14:13 IST
ಕೃಷಿ ಸಚಿವ ಬಿ.ಸಿ.ಪಾಟೀಲ್‌
ಕೃಷಿ ಸಚಿವ ಬಿ.ಸಿ.ಪಾಟೀಲ್‌   

ಕೊಪ್ಪಳ: ಗಂಗಾವತಿ ನಗರ, ಶ್ರೀರಾಮನಗರಗಳನ್ನು ಕೊರೊನಾ ಹಾಟ್ ಸ್ಪಾಟ್‌ಗಳೆಂದು ಗುರುತಿಸಿ, ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು‌ ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೋವಿಡ್‌–19 ಕುರಿತ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲಾಕ್‌ಡೌನ್‌ ಪ್ರದೇಶಗಳಲ್ಲಿ ತುರ್ತು ಸೇವೆಗಳಾದ ಆಹಾರ ಪದಾರ್ಥ, ಕೃಷಿ ಚಟುವಟಿಕೆ, ರಸಗೊಬ್ಬರ ಮಾರಾಟಕ್ಕೆ, ಹಾಲಿನ ಬೂತ್, ಮೆಡಿಕಲ್ ಷಾಪ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಮದ್ಯದಂಗಡಿಬಂದ್ ಇರುತ್ತವೆ. ಲಾಕ್‌ಡೌನ್ ಸಂಬಂಧ ಜಿಲ್ಲಾಧಿಕಾರಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ADVERTISEMENT

₹ 55 ಲಕ್ಷ ಮೊತ್ತದಲ್ಲಿ 1,343 ಆಶಾಕಾರ್ಯಕರ್ತೆಯರಿಗೆ ಹೆಲ್ತ್ ಕಿಟ್ ಖರೀದಿಸಲಾಗುವುದು. ತಾಲ್ಲೂಕುವಾರು ಐಸಿಯು ಬೆಡ್ ಮಾನಿಟರ್‌ಗಳಿಗೆ ₹ 76 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಟೆಕ್ನಿಷಿಯನ್ಸ್‌ಗಳ ಕೊರತೆ ನೀಗಿಸಲು ಈಗಾಗಲೇ 13 ಜನರ ಟೆಂಡರ್ ಕರೆಯಲಾಗಿದ್ದು, ಆದಷ್ಟು ಬೇಗ ಅವರನ್ನು ನೇಮಕ ಮಾಡಲಾಗುವುದು ಎಂದರು.

ತುರ್ತು ಲಭ್ಯತೆ ಅವಶ್ಯಕತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು. 30 ಮೊಬೈಲ್ ಹೆಲ್ತ್ ಯೂನಿಟ್‌ಗಳನ್ನು ಜಿಲ್ಲೆಯಾದ್ಯಂತ ಆರಂಭಿಸುವುದಾಗಿ ಹಾಗೂ ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ:

ಯಾರಾದರೂ ಕೃತಕವಾಗಿ ಗೊಬ್ಬರದ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಕೃಷಿ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.ಎಲ್ಲ ಕಡೆಗಳಲ್ಲಿಯೂ ಕೋವಿಡ್-19‌ ಪ್ರಕರಣಗಳು ಹೆಚ್ಚುತ್ತಿವೆ‌. ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಲಾಗಿದೆ ಎಂದರು.

ಲಾಕ್‌ಡೌನ್ ಮಾಡಿದರೆ ಕರೊನಾ ಹೋಗುತ್ತದೆ. ಇಲ್ಲದಿದ್ದರೆ ಹೋಗುವುದಿಲ್ಲ ಎನ್ನುವುದೆಲ್ಲ ತಪ್ಪು. ಸರ್ಕಾರದ ಸೂಚನೆಗಳಿಗೆ ಜನರ ಸಹಕಾರ ಬೇಕು. ರಾಜ್ಯ ಸರ್ಕಾದ ವಿಫಲ ಆಗಿಲ್ಲ. ನಿಯಂತ್ರಣಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ್‌ ದಡೇಸ್ಗೂರು, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌, ಜಿಲ್ಲಾ ಪಂಚಾಯಿತಿ ಸಿಇಓ ರಘುನಂದನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.