ಅಳವಂಡಿ: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈರುಳ್ಳಿ ಬೆಳೆಗಾರರು ಬೆಲೆ ಕುಸಿತ ಹಾಗೂ ಅತಿವೃಷ್ಟಿಯಿಂದ ನಲುಗುತ್ತಿದ್ದಾರೆ.
ಈರುಳ್ಳಿ ಬೆಳೆಯು ಮಳೆಯಿಂದ ಹಾಳಾಗಿದ್ದು, ಇನ್ನೂ ಬೆಲೆ ಕುಸಿತ ಪರಿಣಾಮ ಕೆಲವು ರೈತರು ತಮ್ಮ ಜಮೀನಿಗೆ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಕೆಲವರು ಟ್ರ್ಯಾಕ್ಟರ್ ಮೂಲಕ ನಾಶ ಪಡಿಸುತ್ತಿದ್ದಾರೆ. ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾಗಿ ಬೆಳೆಯು ಕೊಳೆಯುತ್ತಿದ್ದು, ಇಳುವರಿಯೂ ಸಾಕಷ್ಟು ಕುಸಿದಿದೆ.
ಕಳೆದ ವರ್ಷ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಈ ವರ್ಷವೂ ಉತ್ತಮ ಬೆಲೆ ಸಿಗಬಹುದು ಎಂಬ ನೀರಿಕ್ಷೆಯಿಂದ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಬೆಳೆದ ಬೆಳೆ ನಂತರ ಸುರಿದ ಮಳೆಯಿಂದ ಹಾಳಾಗಿದೆ. ಇದೀಗ ಉಳಿದ ಬೆಳೆಯನ್ನಾದರೂ ಕೊಯ್ಲು ಮಾಡಿ ಮಾರಾಟ ಮಾಡಬೇಕು ಎಂದರೆ ಬೆಲೆ ಕುಸಿದಿದ್ದು, ರೈತರನ್ನು ಕೆಂಗಡಿಸಿದೆ.
‘ಬೀಜ, ಕ್ರಿಮಿನಾಶಕ, ಗೊಬ್ಬರ ಹಾಗೂ ಕೃಷಿ ಚಟುವಟಿಕೆ ಸೇರಿದಂತೆ ರೈತರು ಈರುಳ್ಳಿ ಬೆಳೆಯಲು ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರದಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದ ಪರಿಣಾಮದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ’ ಎಂದು ಬೇಳೂರು ಗ್ರಾಮದ ರೈತರೊಬ್ಬರು ಪ್ರಜಾವಾಣಿಗೆ ತಿಳಿಸಿದರು.
‘ಅತಿವೃಷ್ಟಿಯಿಂದಾಗಿ ಬೆಳೆ ಅಲ್ಪ ಪ್ರಮಾಣದಲ್ಲಿ ಬಂದಿದೆ. ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದರೂ, ಮಾರುಕಟ್ಟೆಯಲ್ಲಿ 50 ಕೆಜಿ ಇರುವ ಈರುಳ್ಳಿಗೆ ₹150 ರಿಂದ ₹200 ಕೇಳುತ್ತಾರೆ. ಕಷ್ಟ ಪಟ್ಟು ಸಾಕಷ್ಟು ಶ್ರಮವಹಿಸಿ ಈರುಳ್ಳಿ ಬೆಳೆದ ಬೆಳೆಗಾರರಿಗೆ ದಿಕ್ಕು ತೊರದಂತಾಗಿದೆ. ಕೊನೆಯ ಪಕ್ಷ ಖರ್ಚು ಮಾಡಿದ ಅಸಲು ಕೂಡ ರೈತರಿಗೆ ಸಿಗದ ಪರಿಸ್ಥಿತಿ ಇದೆ. ಹಾಗಾಗಿ ಕೂಡಲೇ ಸರ್ಕಾರ ಈರುಳ್ಳಿ ಬೆಳೆದು ಅತಿವೃಷ್ಟಿಯಿಂದ ಹಾಳಾದ ಬೆಳೆದ ಪರಿಹಾರ ಜೊತೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎನ್ನುತ್ತಾರೆ ರೈತ ಮುಖಂಡ ಗಾಳೆಪ್ಪ ಸುಣಗಾರ.
ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರು ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ಇಲ್ಲದಂತಾಗಿದೆ. ಜಮೀನಿನಲ್ಲಿ ರೈತರು ಕುರಿ ಮೇಯಿಸುವುದು ಹಾಗೂ ಬೆಳೆ ನಾಶ ಪಡಿಸುತ್ತಿದ್ದೇವೆನಿಂಗಜ್ಜ ಇಡಗಲ್, ಈರುಳ್ಳಿ ಬೆಳೆದ ರೈತ
ದರ ಕುಸಿತದಿಂದಾಗಿ ಈರುಳ್ಳಿ ಬೆಳೆದ ಬೆಳೆಗಾರರು ಕಂಗಲಾಗಿದ್ದು ಕೂಡಲೇ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು.ಗಾಳೆಪ್ಪ ಸುಣಗಾರ, ರೈತ ಮುಖಂಡ ಬೇಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.