ಒಂದೇ ಒಂದು ಚಿತ್ರವಿಲ್ಲದ, ಒಂದೇ ಒಂದು ಪ್ರತಿಮೆ–ಪುತ್ಥಳಿಯೂ ಇಲ್ಲದ ಮತ್ತು ಕನಿಷ್ಠ ಕಲಾಕಾರರ ಕುಂಚದಲ್ಲೂ ಮೂಡಿಬರದ ಪ್ರವಾದಿ ಮುಹಮ್ಮದರು ವಿಶ್ವದಲ್ಲೇ ಅತ್ಯಂತ ಹೆಚ್ಚು ಸ್ಮರಣೀಯ ವ್ಯಕ್ತಿ ಹೇಗಾದರು? ಮುಹಮ್ಮದ್ ಎಂಬುದು ಜಾಗತಿಕವಾಗಿಯೇ ಅತೀ ಹೆಚ್ಚು ಬಳಕೆಯಲ್ಲಿರುವ ಹೆಸರು ಯಾಕಾಯಿತು? ಆಕಾರವಾಗಿ ಕಣ್ಣೆದುರು ಇಲ್ಲದ ವ್ಯಕ್ತಿಗೆ ಇವತ್ತು 200 ಕೋಟಿ ಅನುಯಾಯಿಗಳು ಹೇಗೆ ಸಿಕ್ಕರು? ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 24ರಷ್ಟು ಜನಸ್ತೋಮ ಅವರ ಅನುಯಾಯಿ ಆಗಿರುವುದರ ಗುಟ್ಟೇನು?
ಪ್ರವಾದಿ ಮುಹಮ್ಮದರು ಕಲಾಕಾರರೇ ಇಲ್ಲದ ಕಾಲದಲ್ಲಿ ಹುಟ್ಟಿದ್ದೇನಲ್ಲ. ಅವರು ಹುಟ್ಟಿದ್ದು 6ನೇ ಶತಮಾನದಲ್ಲಿ. ಅವರಿಗಿಂತಲೂ ಮೊದಲೇ ಹಲವು ದಾರ್ಶನಿಕರು ಇದ್ದರು. ಅವರೆಲ್ಲ ಚಿತ್ರಗಳು–ಪುತ್ಥಳಿಗಳು, ಅವರು ಪರಿಚಯಿಸಿದ ತತ್ವಗಳು, ತರ್ಕಗಳು, ಸಂಶೋಧನೆ ಮತ್ತು ಚಿಂತನೆಗಳೆಲ್ಲ ಇವತ್ತಿಗೂ ಪ್ರಚಲಿತದಲ್ಲಿವೆ. ಆದರೆ, ಪ್ರವಾದಿ ಮುಹಮ್ಮದರು ಅವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಅವರು ಪ್ರತಿಪಾದಿಸಿದ ಸಮಾನತೆ, ಮಾನವೀಯ ತುಡಿತ, ಬಲಿಷ್ಠ ಕುಟುಂಬದ ಪರಿಕಲ್ಪನೆ, ನಿಷ್ಠುರವಾದ ನ್ಯಾಯಪರತೆ ಹಾಗೂ ಪರಲೋಕದ ಚಿಂತನೆಗಳು ಅದಕ್ಕೆ ಪ್ರಮುಖ ಕಾರಣ.
21ನೇ ಶತಮಾನವೂ ಸೇರಿದಂತೆ ಜಗತ್ತು ಸರ್ವ ಕಾಲಗಳಲ್ಲೂ ಸಮಾಜದ ಎದುರಿಸುತ್ತ ಬಂದ ಮತ್ತು ಬರುತ್ತಿರುವ ಅತೀದೊಡ್ಡ ಸವಾಲು ಅಸಮಾನತೆ. ಪ್ರವಾದಿ ಮುಹಮ್ಮದರು ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು. ಮಸೀದಿಯಲ್ಲಿ ಜಾತಿ–ಪಂಥಗಳ, ಬಡವ–ಶ್ರೀಮಂತರೆಂಬ ಭೇದವಿಲ್ಲದೇ, ಎಲ್ಲರೂ ಭುಜಕ್ಕೆ ಭುಜ ತಾಗಿಸಿ ಸಾಲಾಗಿ ನಿಂತು ಐದು ಬಾರಿಯ ನಮಾಜ್‌ನಲ್ಲಿ ಮಾಡುವುದನ್ನು ಕಡ್ಡಾಯಗೊಳಿಸಿದರು. ಸಮಾರಂಭಗಳಲ್ಲಿ ಒಂದೇ ತಟ್ಟೆಯ ಸುತ್ತಲೂ ಒಂದಕ್ಕಿಂತ ಹೆಚ್ಚಿನವರು ಕುಳಿತು ಉಣ್ಣುವುದನ್ನು ರೂಢಿಸಿದರು. ವಿಧವೆಯರನ್ನೂ ಜಾತಿ ಭೇದವಿಲ್ಲದೇ ವರಿಸುವ ಕ್ರಮದ ಮೂಲಕ ಎಲ್ಲ ಜಾತಿಗಳನ್ನೂ ವೈವಾಹಿಕ ಸಂಬಂಧದೊಳಗೆ ಪೋಣಿಸಿದರು. ಇದು ಆ ಕಾಲದ ಅಭೂತಪೂರ್ವ ಕ್ರಾಂತಿಯಾಯಿತು.
ಪ್ರವಾದಿ ಮುಹಮ್ಮದರು ಅತ್ಯಂತ ಬಲಿಷ್ಠ ಕುಟುಂಬ ಪದ್ಧತಿಗೆ ಅಡಿಗಲ್ಲು ಹಾಕಿದರು. ವಿವಾಹೇತರ ಸಂಬಂಧವನ್ನು ನಿಷಿದ್ಧಗೊಳಿಸಿದರು. ಅಷ್ಟೇ ಅಲ್ಲ, ವಿವಾಹ ವಿಚ್ಛೇದನ ಅಲ್ಲಾಹುವಿಗೆ ಅತೀ ಅಪ್ರಿಯ ಕಾರ್ಯ ಎಂದೂ ಬೋಧಿಸಿದರು. ಪತಿ–ಪತ್ನಿ ನಡುವಣ ಸಂಬಂಧ ಅತ್ಯಂತ ಬಲಿಷ್ಠವಾಗಿಸಲು ಹಲವು ಮಾರ್ಗದರ್ಶನ ಮಾಡಿದರು. ಸ್ತ್ರೀಯರಿಗೂ ಆಸ್ತಿಯಲ್ಲಿ ಹಕ್ಕನ್ನು ಕೊಟ್ಟರು. ಹೆಣ್ಣನ್ನು ಗಾಜಿಗೆ ಹೋಲಿಸಿದರಲ್ಲದೇ ಅವರೊಂದಿಗೆ ನಾಜೂಕಾಗಿ ವರ್ತಿಸುವಂತೆ ಪತಿಯಂದಿರಿಗೂ ಉಪದೇಶಿಸಿದರು. ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳು ಸ್ವರ್ಗ ಪ್ರವೇಶಿಸಲಾರರು ಎಂದೂ ಎಚ್ಚರಿಸಿದರು.
ನ್ಯಾಯದ ವಿಷಯದಲ್ಲಿ ನಿಷ್ಠುರರಾದರು. ನ್ಯಾಯ ಹೆತ್ತವರ ವಿರುದ್ಧ ಇದ್ದರೂ ನೀವು ನ್ಯಾಯದ ಪರ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ ಎಂದು ಬೋಧಿಸಿದರು. ಅದರಂತೆ ತನ್ನ ಜೀವಿತಾವಧಿಯಲ್ಲಿ ನ್ಯಾಯ ವಿತರಿಸಿದರು. ಇದರ ಜೊತೆಗೇ ಅವರು ಮಂಡಿಸಿದ ಅತೀ ಪ್ರಬಲ ವಿಚಾರಧಾರೆಯೇ ಪರಲೋಕ ಪರಿಕಲ್ಪನೆ. ಇಹಲೋಕಕ್ಕೇ ನಿಮ್ಮ ಬದುಕು ಮುಗಿಯಲ್ಲ. ಭವಿಷ್ಯದಲ್ಲೊಂದು ದಿನ ಲೆಕ್ಕ ಚುಕ್ತಾ ಆಗಲಿದೆ. ಭೂಮಿಯಲ್ಲಿ ಬದುಕಿನ ಬಗೆಗಿನ ವಿಚಾರಣೆ ನಡೆಯಲಿದೆ. ಪಾಪ–ಪುಣ್ಯಗಳ ಆಧಾರದಲ್ಲಿ ಸ್ವರ್ಗ-ನರಕ ಪ್ರವೇಶ ನಿರ್ಧಾರವಾಗಲಿದೆ. ಸಾಸಿವೆ ಕಾಳಿನಷ್ಟು ಅಚ್ಚಲ ನಂಬಿಕೆಗೂ ಬೆಟ್ಟದಷ್ಟು ಪುಣ್ಯ ಸಿಗಲಿದೆ ಎಂದು ಬೋಧಿಸಿದರು.
ಸಾಮಾಜಿಕ ಅನಿಷ್ಟ ಬಡ್ಡಿ ವ್ಯವಹಾರ, ಮದ್ಯಪಾನ ನಿಷೇಧಿಸಿದರು. ದುರ್ಬಲರಿಗೆ ಆರ್ಥಿಕ ಚೈತನ್ಯ ತುಂಬಲು ಜಕಾತ್ (ಕಡ್ಡಾಯ ದಾನ) ಪದ್ಧತಿ ಪರಿಚಯಿಸಿದರು. ಕೇವಲ 63 ವರ್ಷಗಳವರೆಗೆ ಮಾತ್ರ ಜೀವಿಸಿದ್ದ ಅವರು ಅದರ ಒಳಗಡೆಯೇ ತಾನು ಬೋಧಿಸಿದ್ದನ್ನು ಅನುಚಾನಾಗಿ ಪಾಲಿಸಿ ಬದುಕಿದರು. ಮಾನವೀಯ ತುಡಿತದ ಪ್ರತಿರೂಪದಂತಿದ್ದ ಪ್ರವಾದಿ ಮುಹಮ್ಮದರದ್ದು ಅಧ್ಯಯನ ಯೋಗ್ಯ ವ್ಯಕ್ತಿತ್ವ. ಅವರ ವಿಚಾರಧಾರೆಯನ್ನು ಪರಾಮರ್ಶೆಗೆ ಒಡ್ಡುವ ಕುತೂಹಲ ಬೆಳೆಸಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.