
ಕೊಪ್ಪಳ: ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತಾಲ್ಲೂಕಿನ ಹ್ಯಾಟಿ ಗ್ರಾಮದ ಸುತ್ತಲಿನ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಎಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಹೇಳಿದರು.
‘ಗ್ರಾಮೀಣ ಭಾಗದ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆ ಮಾಡಲು ಆದೇಶಿಸಲಾಗಿದೆ. ಕೊಪ್ಪಳದಲ್ಲಿನ 350ಕ್ಕೂ ಹೆಚ್ಚು ಶಾಲೆಗಳು ಮುಚ್ಚುವ ಪಟ್ಟಿಯಲ್ಲಿವೆ, ಹ್ಯಾಟಿಯಲ್ಲಿ ಅಧಿಕೃತವಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಇದಕ್ಕೆ ಚಾಲನೆ ನೀಡುತ್ತಿರುವುದು ಅವರ ಶಿಕ್ಷಣ ವಿರೋಧಿ ನಡೆಗೆ ಸಾಕ್ಷಿಯಾಗಿದೆ’ ಎಂದರು.
‘ಈ ಉದ್ದೇಶಕ್ಕಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗಾಗಿ ಇರುವ ಕೆಕೆಆರ್‌ಡಿಬಿ ನಿಧಿಯಿಂದ ₹700 ಕೋಟಿ ಪಡೆಯಲಾಗಿದೆ. ಅಲ್ಪಸಂಖ್ಯಾತರ ನಿಧಿಯಿಂದ ₹100ಕೋಟಿ ಪಡೆಯಲಾಗಿದೆ’ ಎಂದು ಆರೋಪಿಸಿದ್ದಾರೆ.
ಇದಕ್ಕಾಗಿ ಎಐಡಿಎಸ್‌ಒ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಯುತ್ತಿದೆ. ಹಿರೇಕಾಸನಕಂಡಿ, ಹಿರೇಬಗನಾಳ, ರಾಜರಾಮ್ ಪೇಟೆ ಮತ್ತು ಮಹಮ್ಮದ್ ನಗರದಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಬೀದಿಗಿಳಿದು ಊರಿನ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.