ಕೊಪ್ಪಳ: ಜಿಲ್ಲೆಯ ಸರ್ಕಾರಿ ಹೆಚ್ಚುವರಿ, ಕಾರೇಜ್ ಖಾತಾ, ಗೈರಾಣೆ, ಡೀಮ್ಡ್ ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸಿದ ಸಾಗುವಳಿ ರೈತರಿಗೆ ಭೂಮಿ ಮಂಜೂರಾತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಜಾಗದಲ್ಲಿ ವಾಸಿಸುವ ಜನರಿಗೆ ನಿವೇಶನ ಪತ್ರ ನೀಡಬೇಕು, ಹಲವು ಭಾಗಗಳಲ್ಲಿನ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಡೆದಿರುವ ಮೂರಂ ಗಣಿಕಾರಿಕೆ, ಕಲ್ಲು ಗಣಿಕಾರಿಕೆಯ ಕುರಿತು ಸಮಗ್ರ ತನಿಖೆಯ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು, ಕಾರಟಗಿ ತಾಲೂಕಿನ ಕಕ್ಕರಗೋಳ, ಢಣಾಪುರ, ಬರಗೂರು ಗ್ರಾಮಗಳ ಹತ್ತಿರದ ತುಂಗಾಭದ್ರ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆದಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತುಂಗಾಭದ್ರ ಜಲಾಶಯದ ಹಿನ್ನೀರಿನ ಭೂಮಿಯಲ್ಲಿ ಖನಿಜಯುಕ್ತ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ನ್ಯಾಯಾಲಯದ ಆದೇಶದ ಪ್ರಕಾರ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವ ಸಣ್ಣ ರೈತರನ್ನು ಭೂಮಿಯಿಂದ ಒಕ್ಕಲಿಬ್ಬಿಸದಂತೆ ಕ್ರಮ ವಹಿಸಬೇಕು, ಲಂಚ ಪಡೆದುಕೊಂಡು ಪಂಚನಾಮೆ ಮತ್ತು ಜಿಪಿಎಸ್ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಸಿಪಿಐ (ಎಂಎಲ್) ಡಿ.ಎಚ್. ಪೂಜಾರ, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಬಿ. ಗೋನಾಳ, ಮಲ್ಲೇಶಗೌಡ, ಬಸವರಾಜ ನರೇಗಲ್, ದೇವಪ್ಪ ಕಂಬಳಿ, ಪಾಮಣ್ಣ ಮಲ್ಲಾಪುರ, ನಿರುಪಾದಿ ಬುನ್ನಟ್ಟಿ, ಪರಶುರಾಮ, ಯಮನೂರಪ್ಪ ಕೆ. ಮಲ್ಲಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.