ADVERTISEMENT

ಸೋನಿಯಾ ವಿಚಾರಣೆ ಖಂಡಿಸಿ ಪ್ರತಿಭಟನೆ

ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಕಾಂಗ್ರೆಸ್‌ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 14:15 IST
Last Updated 22 ಜುಲೈ 2022, 14:15 IST
ಕೊಪ್ಪಳದಲ್ಲಿ ಶುಕ್ರವಾರ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆ ವೇಳೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿದರು
ಕೊಪ್ಪಳದಲ್ಲಿ ಶುಕ್ರವಾರ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆ ವೇಳೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿದರು   

ಕೊಪ್ಪಳ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆ ನಡೆಸುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ಟಿ. ಪರಮೇಶ್ವರನಾಯ್ಕ್, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಬಸವರಾಜ ಹಿಟ್ನಾಳ್, ಎಚ್‌.ಆರ್‌. ಶ್ರೀನಾಥ್, ಇಕ್ಬಾಲ್‌ ಅನ್ಸಾರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪರಮೇಶ್ವರ ನಾಯ್ಕ್‌ ಮಾತನಾಡಿ ‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ನೆಪದಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಹಾಗೂ ಪಕ್ಷದ ನಾಯಕರಿಗೆ ಅನಗತ್ಯ ಕಿರುಕುಳು ನೀಡುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಮ್ಮ ಪಕ್ಷವನ್ನು ಟೀಕಿಸುತ್ತಿದೆ. ಬಿಜೆಪಿಯವರು ಜನರಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಮತಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಇಕ್ಬಾಲ್‌ ಅನ್ಸಾರಿ ಮಾತನಾಡಿ ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನಯಾ ಪೈಸೆ ಹಣ ಮುಟ್ಟಿಲ್ಲ. ಯಾವುದೇ ಹಣ ವರ್ಗಾವಣೆಯಾಗಿಲ್ಲ. ಸಂವಿಧಾನ, ಕಾನೂನು ಎಲ್ಲರಿಗೂ ಸಮ. ಆದರೆ, ಸರಿಯಾದ ಇತಿಹಾಸ ತಿಳಿದುಕೊಂಡು ಇತರರ ಮೇಲೆ ಆರೋಪ ಮಾಡಬೇಕು. ಸೇಡಿನ ರಾಜಕಾರಣದಿಂದ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ’ ಎಂದು ದೂರಿದರು.

ಎಚ್‌.ಆರ್. ಶ್ರೀನಾಥ್‌ ಮಾತನಾಡಿ ‘ಜಾರಿ ನಿರ್ದೇಶನಾಲಯದಿಂದ ಸೋನಿಯಾ ಗಾಂಧಿ ಅವರಿಗೆ ವಿನಾಕಾರಣ ನೋವು ಕೊಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಬೇಕಾಗಿದೆ. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜೋಡೆತ್ತುಗಳು ಇದ್ದಂತೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ’ ಎಂದರು.

‘ಕೊಪ್ಪಳದಿಂದ ಸ್ಪರ್ಧಿಸುತ್ತೇನೆ ಎಂದಿಲ್ಲ’

ಕೊಪ್ಪಳ: ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಅವರು ಇಲ್ಲಿ ಸ್ಪರ್ಧಿಸಿದರೆ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎನ್ನುವ ಕಾರಣಕ್ಕಾಗಿ ಜಿಲ್ಲೆಯಿಂದಲೇ ಅವರು ಸ್ಪರ್ಧಿಸಬೇಕು ಎನ್ನುವುದು ಇಲ್ಲಿನ ಜನರ ಒತ್ತಾಸೆಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

‘ಸಿದ್ದರಾಮಯ್ಯ ಅವರು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ನಾಯಕರಲ್ಲ. ಅವರು ಎಲ್ಲಾ ಸಮುದಾಯಕ್ಕೂ ಸೇರಿದವರು. ಅಭಿವೃದ್ಧಿ ದೃಷ್ಟಿಯಿಂದ ಕೊಪ್ಪಳದಿಂದಲೇ ಸ್ಪರ್ಧಿಸಿ ಎಂದು ನಾನೇ ಆಹ್ವಾನ ನೀಡಿದ್ದೇನೆ’ ಎಂದು ತಿಳಿಸಿದರು.

ಶಿವರಾಜ ತಂಗಡಗಿ ಮಾತನಾಡಿ ’ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಉತ್ತಮವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಇಲ್ಲಿಗೂ ಆಹ್ವಾನಿಸಲಾಗಿದೆ. ಸಿದ್ದರಾಮಯ್ಯ ಕೇವಲ ಅಹಿಂದ ನಾಯಕರಲ್ಲ’ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ಪಕ್ಷದ ಶಕ್ತಿ. ಸಿದ್ದರಾಮಯ್ಯನವರು ರಾಜ್ಯದಲ್ಲಿ ಎಲ್ಲಿಯೇ ಸ್ಪರ್ಧಿಸಿದರೂ ಗೆಲ್ಲುತ್ತಾರೆ.
ಶಿವರಾಜ ತಂಗಡಗಿ,ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ

ಮುಖ್ಯಮಂತ್ರಿ ಆಗಬೇಕು ಎನ್ನುವುದು ಎಲ್ಲರಿಗೂ ಆಸೆ ಇರುತ್ತದೆ. ಅದನ್ನು ಪಕ್ಷದ ಶಾಸಕರು ಹಾಗೂ ಹೈಕಮಾಂಡ್‌ ತೀರ್ಮಾನಿಸಲಿದ್ದಾರೆ.
ಪರಮೇಶ್ವರ ನಾಯ್ಕ್‌,ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.