ADVERTISEMENT

ಕೊಪ್ಪಳ: ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 6:51 IST
Last Updated 10 ಜುಲೈ 2025, 6:51 IST
ಕೊಪ್ಪಳದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಕೊಪ್ಪಳದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ಕೊಪ್ಪಳ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನಾಲ್ಕು ಸಂಹಿತೆಗಳು ಕಾರ್ಮಿಕರನ್ನು ನವ ಗುಲಾಮಿಗಿರಿಗೆ ತಳ್ಳಲು ಹೊರಟಿವೆ. ಇವುಗಳನ್ನು ವಾಪಸ್ ಪಡೆಯಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಬುಧವಾರ ನಡೆದ ಮುಷ್ಕರಕ್ಕೆ ಇಲ್ಲಿಯೂ ಬೆಂಬಲ ವ್ಯಕ್ತವಾಯಿತು.

ವಿವಿಧ ಸಂಘಟನೆಗಳು ಒಂದೆಡೆ ಸೇರಿ ಅಶೋಕ ವೃತ್ತದಲ್ಲಿ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ನಿರ್ಮಿಸಿದರು. ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ವಾಪಸ್ ಪಡೆಯಬೇಕು. ಕನಿಷ್ಠ ವೇತನವನ್ನು ಮಾಸಿಕ ₹36 ಸಾವಿರಕ್ಕೆ ನಿಗದಿ ಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ₹8,000 ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಎಲ್ಲರಿಗೂ ಉದ್ಯೋಗ ಒದಗಿಸಬೇಕು. ಉದ್ಯೋಗ ಮೂಲಭೂತ ಹಕ್ಕಾಗಲಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ದೇಶದಾದ್ಯಂತ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹುದ್ದೆ ಭರ್ತಿ ಮಾಡಲು ಹಿಂದೇಟು ಹಾಕುತ್ತಿವೆ. ನಿಜವಾದ ಅರ್ಥದಲ್ಲಿ ಕಾಯಂ ಉದ್ಯೋಗ ಎಂಬುದು ಈಗ ಕನಸಾಗಿದೆ. ಖಾಲಿ ಹುದ್ದೆಗಳನ್ನೂ ಗುತ್ತಿಗೆ, ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೆಲ ಹೊತ್ತಿನ ಬಳಿಕ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ಈ ಹೋರಾಟಕ್ಕೆ ಎಐಡಿವೈಒ, ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಜಿಲ್ಲಾ ಸಮಿತಿ, ಸಂಯುಕ್ತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದವು. 

ಜೆಸಿಟಿಯು ಸಮಿತಿಯ ಮುಖಂಡ ಖಾಸೀಂ ಸರ್ದಾರ್‌, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹೋರಾಟಗಾರರಾದ ಬಸವರಾಜ್ ಶೀಲವಂತರ, ಜಿ.ನಾಗರಾಜ್, ಶರಣು ಗಡ್ಡಿ, ಎಸ್.ಎ.ಗಫಾರ್, ಕೆ.ಬಿ.ಗೋನಾಳ, ಗಾಳೆಪ್ಪ ಮುಂಗೋಲಿ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ರಾಜು ಮುನಿರಾಬಾದ್‌, ಡಿ.ಎಚ್‌.ಪೂಜಾರ, ಅಮರೇಶ ಡಾಣಿ, ಮಖಬೂಲ್ ರಾಯಚೂರು, ಅನ್ನಪೂರ್ಣ ಬೃಹನ್ಮಠ, ಶಿವಲೀಲಾ ಅಗಳಕೇರಾ, ಸಂಜಯ್ ದಾಸ್ ಕೌಜಗೇರಿ, ಕರೀಂ ಪಾಷಾ ಗಚ್ಚಿನಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಪ್ರತಿಭಟನಾನಿರತರನ್ನು ಪೊಲೀಸರು ಕರೆದೊಯ್ದರು
ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತದೆ
ಖಾಸೀಂ ಸರ್ದಾರ್‌ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.