ಕನಕಗಿರಿ: ರಾಜ್ಯದ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಎಸ್ಎಫ್ಐ ಪದಾಧಿಕಾರಿಗಳು ಸಮೀಪದ ನವಲಿ ಗ್ರಾಮದ ಉಪ ತಹಶೀಲ್ದಾರ್ ಕಚೇರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಮಾತನಾಡಿ, ‘ಅಹಿಂದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ಯೋಜನೆಯಲ್ಲಿ ಕತ್ತರಿ ಪ್ರಯೋಗ ಮಾಡಿರುವ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ’ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿಯಲ್ಲಿ ಶೇ 60 ರಿಂದ 74.99 ಫಲಿತಾಂಶ ದೊಂದಿಗೆ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ₹ 7,000 ಪ್ರೋತ್ಸಾಹ ಹಣವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರದ್ದುಗೊಳಿಸಲಾಗಿದೆ’ ಎಂದು ದೂರಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವರು ಒಂದು ಬಾರಿ ತಮ್ಮ ಇಲಾಖೆಯ ಪರಿಷ್ಕತ ಆದೇಶವನ್ನು ಪರಿಶೀಲಿಸಬೇಕು’ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಮರುಪಾವತಿ ವಿಷಯಕ್ಕೆ ಪರಿಷ್ಕೃತ ಆದೇಶವನ್ನು ಹೊರಡಿಸಿ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿಗೆ ಕೊಕ್ಕೆ ಹಾಕಿದೆ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಯವರು, ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಬಿಜೆಪಿ ಸರ್ಕಾರ ಕಡಿತಗೊಳಿಸಿದ್ದನ್ನು ಸರಿಪಡಿಸಿಲ್ಲ’ ಎಂದು ಕಿಡಿ ಕಾರಿದರು.
ಮುಖಂಡರಾದ ಹನುಮೇಶ ಮುಕ್ಕುಂಪಿ, ಮೌನೇಶ, ವಿದ್ಯಾರ್ಥಿಗಳಾದ ಯಮನೂರ, ಜಯಲಕ್ಷ್ಮಿ, ಕಲ್ಪನಾ, ಶಾಂತ, ಲಕ್ಷ್ಮಿ, ಚೈತ್ರಾ ದರ್ಶನ, ಚಂದ್ರ ಪ್ರಸಾದ, ಮಲ್ಲಿಕಾರ್ಜುನ, ಚಂದ್ರಶೇಖರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.