ADVERTISEMENT

ನ್ಯಾಯಾಧೀಶರ ಗಡಿಪಾರು ಮಾಡಿ: ಎಚ್.ಎನ್‌.ಬಡಿಗೇರ

ಗಂಗಾಧರ ತಂಡದಿಂದ ಮೊಳಗಿದ ಕ್ರಾಂತಿಗೀತೆಗಳು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 7:13 IST
Last Updated 16 ಫೆಬ್ರುವರಿ 2022, 7:13 IST
ಕನಕಗಿರಿಯಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು
ಕನಕಗಿರಿಯಲ್ಲಿ ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು   

ಕನಕಗಿರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜನಗೌಡ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿಯ ದಲಿತ ಹಾಗೂ ಪ್ರಗತಿಪರ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.

ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶಾಸಕರ ಶಾಲೆ, ರೆಡ್ಡಿ, ತೆಗ್ಗಿನಮನಿ, ಮೋಚಿ ಕಾಲೊನಿಯಿಂದ ರಾಜಬೀದಿ ಮೂಲಕ ವಾಲ್ಮೀಕಿ ವೃತ್ತದವರೆಗೆ ಶಾಂತಿಯುತವಾಗಿ ಮೆರವಣಿಗೆ ನಡೆಯಿತು.

ADVERTISEMENT

ಸಿಂಧನೂರಿನ ಪ್ರಗತಿಪರ ಚಿಂತಕ ಎಚ್.ಎನ್‌.ಬಡಿಗೇರ ಮಾತನಾಡಿ,‘ದೇಶದ ಕಾನೂನು ಪಾಲನೆ ಹಾಗೂ ರಕ್ಷಣೆ ಮಾಡಬೇಕಾದ ನ್ಯಾಯಾಧೀಶರು ಸಂವಿಧಾನ ಶಿಲ್ಪಿಯನ್ನು ಹೀಗೆ ಮಾಡಿರುವುದು ಖಂಡನೀಯ’ ಎಂದರು.

‘ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಚಾಲಕರಾಗಿದ್ದು, ದಲಿತ ಪರ ಸಂಘಟನೆಗಳು ನ್ಯಾಯಾಧೀಶರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ಸರ್ಕಾರ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.

ಚಿಂತಕ ಲಿಂಗಣ್ಣ ಜಂಗಮರಳ್ಳಿ ಮಾತನಾಡಿ,‘ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ವಿರುದ್ಧ ನಡೆಯುತ್ತಿರುವ ಹೋರಾಟ ಒಂದು ಜಾತಿ, ಧರ್ಮ, ಇಲಾಖೆ ವಿರುದ್ಧವಲ್ಲ. ಒಂದು ಪಕ್ಷದ ಪರವಾಗಿಯೂ ಇಲ್ಲ. ಸಂವಿಧಾನ ಉಳಿಸುವ ಸಲುವಾಗಿ ಹೋರಾಟ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ, ವಿವಿಧ ಸಂಘಟನೆಗಳ ಮುಖಂಡರಾದ ಜೆ.ಭಾರಧ್ವಾಜ್, ಬಸವರಾಜ ಶೀಲವಂತರ, ಡಿ.ಎಚ್.ಪೂಜಾರ, ರತ್ನಾಕರ, ಸಿದ್ದಪ್ಪ ನೀರ್ಲೂಟಿ ಮಾತನಾಡಿದರು.

ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಹೊನ್ನೂರುಸಾಬ, ಮಾಜಿ ಉಪಾಧ್ಯಕ್ಷ ಕನಕಪ್ಪ ತಳವಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಹನುಮಂತಪ್ಪ ಬಸರಿಗಿಡದ, ರಾಜಾಸಾಬ ನಂದಾಪುರ, ನೂರುಸಾಬ ಗಡ್ಡಿಗಾಲ, ರಾಕೇಶ ಕಂಪ್ಲಿ, ಕಂಠಿರಂಗ ನಾಯಕ, ಶೇಷಪ್ಪ ಪೂಜಾರ, ಪ್ರಮುಖರಾದ ಪಾಮಣ್ಣ ಅರಳಿಗನೂರು, ಲಿಂಗರಾಜ ನವಲಿ, ರಮೇಶ ಕೋಟಿ, ಸತ್ಯಪ್ಪ ಭೋವಿ, ದೇವಪ್ಪ ತೋಳದ, ನಾಗೇಶ ಮಲ್ಲಾಪುರಿ, ರಾಮನಗೌಡ ಬುನ್ನಟ್ಟಿ, ನಾಗೇಶ ಬಡಿಗೇರ, ಚಿದಾನಂದ ಭಜಂತ್ರಿ, ಖಾದರಬಾಷ ಗುಡಿಹಿಂದಲ, ರವಿ ಭಜಂತ್ರಿ, ಗೌಸುಸಾಬ ಗುರಿಕಾರ, ಶಾಂತಪ್ಪ ಬಸರಿಗಿಡದ, ಚಂದ್ರಶೇಖರ ಸೂಡಿ, ವೆಂಕೋಬ ಭೋವಿ, ಅಕ್ಕಿರೊಟ್ಟಿ ಹುಲಗಪ್ಪ, ಹುಸೇನಪ್ಪ , ಶರಣಪ್ಪ ಸೋಮಸಾಗರ, ಶಿವಶಂಕರ ಚೆನ್ನದಾಸರ, ಸುಭಾಸ ಕಂದಕೂರ, ನಾಗಪ್ಪ ಹುಗ್ಗಿ, ಪಾಂಡರಂಗ ರಾಠೋಡ್, ಗುರುನಗೌಡ, ಹುಲಿಗೆಮ್ಮ ನಾಯಕ, ಗ್ಯಾನಪ್ಪ ಗಾಣದಾಳ, ಸಣ್ಣ ಹನುಮಂತಪ್ಪ, ಕೆಂಚಪ್ಪ, ನಿಂಗಪ್ಪ ಪೂಜಾರ, , ನೀಲಕಂಠ ಬಡಿಗೇರ, ಕನಕಪ್ಪ ಮ್ಯಾಗಡೆ, ಸುರೇಶ ಕುರುಗೋಡ ಹಾಗೂ ವಿವಿಧ ಪಕ್ಷದ ಹಾಗೂ ಸಂಘಟನೆಗಳ ಮುಖಂಡರು ಇದ್ದರು. ಡಿವೈಎಸ್ ಪಿ.ರುದ್ರೇಶ ಉಜ್ಜಿನಕೊಪ್ಪ, ಪಿಐ ಗಳಾದ ಪರಸಪ್ಪ ಭಜಂತ್ರಿ, ಉದಯರವಿ ಅವರು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಕನಕಗಿರಿ ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಶಾಲಾ–ಕಾಲೇಜು, ಬ್ಯಾಂಕ್ ಇತರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ಇಲ್ಲದ ಪರಿಣಾಮ ಪ್ರಯಾಣಿಕರು ಪರದಾಟ ನಡೆಸಿದರು. ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.