
ಪ
ಕನಕಗಿರಿ: ರೈತರ, ಕಾರ್ಮಿಕರ, ಮಹಿಳೆಯರ ಹಾಗೂ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಸಿರು ಸೇನೆ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಪ್ರತಿಭಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ,‘ತಾಲ್ಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ರೈತರ ಕೈಗೆ ಸಿಗದೆ, ಸಾಕಷ್ಟು ಸಮಸ್ಯೆಗಳು ಉದ್ಬವವಾಗುತ್ತಿವೆ. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ರೈತರು ಅತಿವೃಷ್ಟಿಯಿಂದ ತೊಗರಿ ಬೆಳೆ ಬೆಳೆಯದೆ ನಷ್ಟವನ್ನು ಅನುಭವಿಸಿದ್ದಾರೆ’ ಎಂದರು.
‘ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಬೇಕಾಬಿಟ್ಟಿಯಾಗಿ ಸಮೀಕ್ಷೆ ಮಾಡಿ, ಅತಿವೃಷ್ಟಿಗೆ ಒಳಪಟ್ಟ ತೊಗರಿ ಬೆಳೆ ನಷ್ಟ ಹೊಂದಿದ ರೈತರ ಪಟ್ಟಿಯನ್ನು ತಮ್ಮ ಕಚೇರಿಯಲ್ಲಿ ಕುಳಿತು ಮತ್ತು ಕೆಲವರ ಹೊಲಗಳಿಗೆ ಮಾತ್ರ ಭೇಟಿ ನೀಡಿ ಪರಿಶೀಲಿಸಿ ಹಲವರ ಹೆಸರುಗಳನ್ನು ಮಾತ್ರ ಬೆಳೆ ಪರಿಹಾರ ತಂತ್ರಾಂಶದಲ್ಲಿ ಸೇರಿಸಿದ್ದಾರೆ’ ಎಂದರು.
‘ತೊಗರಿ ಖರೀದಿ ಕೇಂದ್ರದಲ್ಲಿ ರೈತರ ದಾಖಲಾತಿಗಳನ್ನು ಕೊಡುವಾಗ ಬೆಳೆ ಸಮೀಕ್ಷೆಯ ದಾಖಲೆ ಪಹಣಿಯಲ್ಲಿ ಬರದೇ ನೋಂದಣೆ ಮಾಡಿಸಲು ರೈತರು ಪರದಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಭೀಮನಗೌಡ, ಹನುಮಂತ ಪೂಜಾರಿ, ಸೋಮನಾಥ ನಾಯಕ, ಬಾಲಪ್ಪ, ಸಣ್ಣ ಯಂಕಪ್ಪ ಇದ್ದರು. ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ ಪ್ರಭಾರ ಇಒ ರಾಜಶೇಖರ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.