ADVERTISEMENT

ಕಾರ್ಖಾನೆಗಳ ವಿಸ್ತರಣೆಗೆ ಮಾನದಂಡವಿದೆಯೇ: ಎಸ್.ಎಂ. ಕಂಬಾಳಿಮಠ ಪ್ರಶ್ನೆ

ಕೊಪ್ಪಳ ‌ಬಂದ್: ಮುಕ್ತ ಚರ್ಚೆಗೆ ನಾಳೆ ಮಹತ್ವದ ಸಭೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:58 IST
Last Updated 12 ಫೆಬ್ರುವರಿ 2026, 6:58 IST
ಕೊಪ್ಪಳದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಎಸ್.ಎಂ. ಕಂಬಾಳಿಮಠ ಮಾತನಾಡಿದರು
ಕೊಪ್ಪಳದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಎಸ್.ಎಂ. ಕಂಬಾಳಿಮಠ ಮಾತನಾಡಿದರು   

ಕೊಪ್ಪಳ: ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ದದ ಹೋರಾಟ ಬುಧವಾರ 104 ದಿನಗಳನ್ನು ಪೂರೈಸಿತು.

ಧರಣಿ ಬೆಂಬಲಿಸಿ ನಿವೃತ್ತ ಶಿಕ್ಷಕ ಎಸ್.ಎಂ. ಕಂಬಾಳಿಮಠ ಮಾತನಾಡಿ, ‘ಕಾರ್ಖಾನೆಗಳು ಸ್ಥಾಪನೆ ಅಥವಾ ವಿಸ್ತರಣೆ ಇಲ್ಲಿನ ಜನ ಜೀವನದ ಮೇಲೆ ದುಷ್ಪರಿಣಾಮ ಬೀರುವಂತಿರಬಾರದು. ಆದರೆ ಇಲ್ಲಿನ ಪರಿಸರದ ಮೇಲೆ ಮಾಲಿನ್ಯ ಮಾಡುತ್ತದೆ ಎಂದಾದರೆ ಯಾವ ಉದ್ದೇಶ ಇಟ್ಟುಕೊಂಡು ಕಾರ್ಖಾನೆಗಳು ವಿಸ್ತರಣೆ ಆಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈಗ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳನ್ನು ತಡೆಯಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸತ್ಯ ತಿಳಿದುಕೊಳ್ಳಲಿ. ಇಲ್ಲದಿದ್ದರೆ ಜನರು ಸಂಪೂರ್ಣವಾಗಿ ಉಸಿರಾಟದ ತೊಂದರೆ ಕಾಯಿಲೆಗೆ ತುತ್ತಾಗುವುದು ಶತಸಿದ್ಧ. ಅನಾರೋಗ್ಯದ ಕಾರಣಕ್ಕೆ ಈಗಾಗಲೇ ಜಾಗೃತ ನೌಕರರ ವರ್ಗ ಇಲ್ಲಿಂದ ವರ್ಗಾವಣೆಗೊಳ್ಳುತ್ತಿದ್ದಾರೆ. ಮತ್ತೆ ಕೊಪ್ಪಳದಲ್ಲಿ ನೆಲೆ ನಿಲ್ಲುವ ಬಯಕೆಯನ್ನು ಕೈಬಿಟ್ಟಿದ್ದಿರೆ. ಅಂತವರು ಇಲ್ಲಿ ನಿವೇಶನಗಳನ್ನಾಗಲಿ ಮನೆಗಳನ್ನಾಗಲಿ ಖರೀದಿ ಮಾಡುತ್ತಿಲ್ಲ. ಮತ್ತು ಯಾವುದೆ ಮನೆ ಕಟ್ಟುತ್ತಿಲ್ಲ ಅಂದರೆ ಏನು ಅರ್ಥ ‌ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಸಂತೋಷ್ ದೇಶಪಾಂಡೆ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ಗವಿಸಿದ್ದಪ್ಪ ಪೋ. ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ವಿಜಯಮಹಾಂತೇಶ ಹಟ್ಟಿ, ರಂಗಕರ್ಮಿ ಶರಣು ಶೆಟ್ಟರ್, ಶರಣು ಪಾಟೀಲ್, ಸುರೇಶ ಎಚ್, ಬಸವರಾಜ ಎಸ್, ಶಿವಪ್ಪ ಜಲ್ಲಿ , ನಾಗರಾಜ್ ಕುಷ್ಟಗಿ, ರಮೇಶ ಮೈನಹಳ್ಳಿ, ಬಸವರಾಜಪ್ಪ ಶೆಟ್ಟರ್, ವಿಶಾಲಾಕ್ಷಿ ಶೆಟ್ಟರ್, ಈರಮ್ಮ ಉಂಡಿ, ಗಂಗಮ್ಮ ಕುರುಗೋಡು, ಬೀಬಿಜಾನ್ ಮುಂತಾದವರು ಪಾಲ್ಗೊಂಡಿದ್ದರು.

ಸಭೆಗೆ ಆಹ್ವಾನ–ಬೆಟ್ಟದೂರು: ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ‘ಫೆ.24 ರಂದು ಕೊಪ್ಪಳ ಜಿಲ್ಲಾ ಕೇಂದ್ರ, ಭಾಗ್ಯನಗರ ಸಂಪೂರ್ಣ ಬಂದ್ ಮಾಡಲು ಪೂರ್ವಭಾವಿ ಸಭೆ ಕರೆಯಲು ನಿರ್ಣಯ ಮಾಡಲಾಗಿದೆ. ಇದರ ಯಶಸ್ವಿಗಾಗಿ ಫೆ. 13ರಂದು ಬೆಳಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆಯನ್ನು ನಗರದ ಲಕ್ಷ್ಮೀ ಚಿತ್ರಮಂದಿರ ಪಕ್ಕದ ಮಹಾಂತಯ್ಮನಮಠ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ’ ಎಂದರು.

ಇದುವರೆಗೆ ಹೋರಾಟ ಬೆಂಬಲಿಸಿದ ಎಲ್ಲಾ ಸಂಘ, ಸಂಸ್ಥೆ, ಸಮಾಜ ಮುಖಂಡರು, ಸಮುದಾಯ ನಾಯಕರು, ರಾಜಕೀಯ ಧುರೀಣರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಟ್ರಸ್ಟ್ ಚಾರಿಟಿಗಳು, ವಕೀಲರು, ಪರಿಸರ ಪ್ರೇಮಿಗಳು, ಸಾಹಿತಿ, ಚಿಂತಕರು, ಕನ್ನಡಪರ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿಗಳು ಹಾಗೂ ಪುರ ಪ್ರಮುಖರು ಈ ಸಭೆಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.