
ಯಲಬುರ್ಗಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಅಗೌರವಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವಿವಿಧ ಬೀದಿಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಪ್ರಕಾಶ ನಾಶಿ ಅವರಿಗೆ ಮನವಿ ಸಲ್ಲಿಸಿ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ‘ವಿಶ್ವವೇ ಮೆಚ್ಚುವ ಆಡಳಿತ ನಡೆಸಿ ಮಾದರಿಯಾಗಿರುವ ಮೋದಿ ಅವರನ್ನು ಟೀಕಿಸುವ ಮೂಲಕ ರಾಹುಲ್ ಗಾಂಧಿ ದೊಡ್ಡವರಾಗುತ್ತೇವೆ ಎಂಬ ಭ್ರಮೆ ಇಟ್ಟುಕೊಂಡಿದ್ದಾರೆ. ರಾಜಕೀಯ ಗಂಧಗಾಳಿ ಗೊತ್ತಿಲ್ಲದ ಚಿಕ್ಕ ಮಗುವಿನಂತೆ ವರ್ತಿಸುವ ರಾಹುಲ್ ಗಾಂಧಿಯರ ಪದೇಪದೇ ಮೋದಿ ಅವರನ್ನು ಟೀಕಿಸುತ್ತಿರುವುದು ಆಕಾಶಕ್ಕೆ ಮುಖಮಾಡಿ ಉಗಿದಂತಿರುತ್ತದೆ’ ಎಂದು ಲೇವಡಿ ಮಾಡಿದರು.
ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ‘ರಾಹುಲ್ ಅವರು ತಮ್ಮ ಪಕ್ಷದ ಮಹಿಳಾ ಸಂಸದರ ಮೂಲಕ ಮೋದಿಯವರನ್ನು ಅವಮಾನಿಸುವ ಕೆಟ್ಟ ಪ್ರವೃತ್ತಿ ಬೆಳೆಸಿಕೊಂಡಿದ್ದು, ಅತ್ಯಂತ ಹೇಯ ಕೃತ್ಯವಾಗಿದೆ’ ಎಂದು ಹರಿಹಾಯ್ದರು.
ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಸವರಾಜ ಗುಳಗುಳಿ ಮಾತನಾಡಿ, ಈಚೆಗೆ ರಾಜ್ಯದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಆರ್‌ಎಸ್‍ಎಸ್ ಬಗ್ಗೆ ಕೀಳಾಗಿ ಮಾತನಾಡಿದ್ದು ಕಾಂಗ್ರೆಸ್ ನಾಯಕರ ನೀಚ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಬಿಜೆಪಿ ಮೋರ್ಚಾ ಅಧ್ಯಕ್ಷೆ ಸಂತೋಷಿಮಾ ಜೋಷಿ ಮಾತನಾಡಿ, ‘ರಾಹುಲ್ ಗಾಂಧಿ ಅವರು ಮಾತಾಡುವ ಯಾವುದೇ ಮಾತಿಗೂ ತಳಬುಡ ಇರುವುದಿಲ್ಲ, ಮೋದಿಯವರನ್ನು ಟೀಕಿಸುವುದನ್ನು ಬಿಟ್ಟರೇ ಬೇರೆನೂ ಗೊತ್ತಿಲ್ಲ’ ಎಂದರು.
ಬಿಜೆಪಿ ಅಧ್ಯಕ್ಷ ಮಾರುತಿ ಗಾವರಾಳ, ಅಮರೇಶ ಹುಬ್ಬಳ್ಳಿ, ಅಶೋಕ ಅರಿಕೇರಿ, ವಸಂತ ಬಾವಿಮನಿ, ಕಳಕಪ್ಪ ತಳವಾರ, ದೊಡ್ಡಯ್ಯ ಗುರುವಿನ, ಕಲ್ಲೇಶಪ್ಪ ಕರಮುಡಿ, ಈರಪ್ಪ ಬಣಕಾರ, ರವಿ ಕಲಬುರ್ಗಿ ಬಾಪುಗೌಡ ಪಾಟೀಲ, ಜಗದೀಶ ಸೂಡಿ, ಶರಣಪ್ಪ ಕೊಡಗಲಿ, ಸುರೇಶ ಬಡಿಗೇರ, ಶಂಕರ ಬಾವಿಮನಿ, ಪ್ರಕಾಶ ಹಿರೇಮನಿ, ಮಾಂತೇಶ ಭಾಸ್ಕರ, ಪಾರ್ವತಿ ಅನಸಿ, ನೀಲಮ್ಮ, ಬಸಮ್ಮ ಗೋಂದಿ, ನೇತ್ರಾ ಹಿರೇಮಠ, ಶೀತಲ ದೇಸಾಯಿ, ರೇಖಾ ಅಯ್ಯನಗೌಡ. ಜಗನ್ನಾಥ ದೇಸಾಯಿ, ಶ್ರೀಧರ ನಾಯಕ್ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.