ADVERTISEMENT

ಮಳೆ ಹಾನಿ: ಪರಿಹಾರಕ್ಕೆ ರೈತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯ

ಬೆಳಗಾವಿ ಚಲೋ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 13:43 IST
Last Updated 10 ಡಿಸೆಂಬರ್ 2021, 13:43 IST

ಕೊಪ್ಪಳ: ‘ಬೆಳೆ ನಷ್ಟ ಪರಿಹಾರ, ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ‘ ಎಂದು ಸಂಯುಕ್ತ ಹೋರಾಟ-ಕರ್ನಾಟಕ (ಎಸ್‍ಕೆಎಂ) ಹಾಗೂ ರೈತ ಸಂಘಟನೆಗಳ ಸಮನ್ವಯ ಸಮಿತಿ ತಿಳಿಸಿದೆ.

ಬಂಡಾಯ ಸಾಹಿತ್ಯ ಸಂಘಟನೆಯ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿ 'ಬೆಳಗಾವಿಯಲ್ಲಿ ನಡೆಯುವ ರೈತರ ಅಧಿವೇಶನಕ್ಕೆ ಮುನ್ನಡೆಯಿರಿ' ಎಂಬ ಘೋಷಣೆಯೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.

ಅಕಾಲಿಕ ಮಳೆಗೆ ವಿವಿಧ ಬೆಳೆಗಳು ನಷ್ಟವಾಗಿದ್ದರಿಂದ ರೈತರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಅಳಿದುಳಿದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರು ರೈತರ ಸಂಕಷ್ಟವನ್ನು ಕಡೆಗಣಿಸಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ತೊಗರಿ, ಸಜ್ಜೆ, ಮೆಕ್ಕೆ ಜೋಳ ಇತರೆ ಕೃಷಿ ಉತ್ಪನ್ನಗಳ ಬೆಲೆ ತೀವ್ರವಾಗಿ ಕುಸಿದಿದೆ. ಭತ್ತದ ಬೆಲೆ ಕ್ವಿಂಟಾಲ್‌ಗೆ ₹ 1200 ಕುಸಿದರೂ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಶಾಸಕರು, ಸಂಸದರು ಬಾಯಿ ಬಿಡುತ್ತಿಲ್ಲ. ಮುಖ್ಯಮಂತ್ರಿ ಅವರು ದೀಪಾವಳಿ ನಂತರ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಎಲ್ಲೂ ಕೂಡಾ ಖರೀದಿ ಕೇಂದ್ರ ಇಂದಿಗೂ ತೆರೆದಿರುವುದಿಲ್ಲ‘ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ನೋಂದಣೆ ಮಾಡಲಾಗುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಮಾತಿನಲ್ಲಿ ರೈತರ ಪರ, ಕೃತಿಯಲ್ಲಿ ವರ್ತಕರ, ದಲ್ಲಾಳಿ ಪರವಾಗಿದೆ. ವರ್ತಕರಿಗೆ ಲಾಭ ಮಾಡುವ ಉದ್ದೇಶದಿಂದ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತಿಲ್ಲ. ಗಂಗಾವತಿ, ಕಾರಟಗಿ ತಾಲ್ಲೂಕಿನಲ್ಲಿ ಭತ್ತ ಕಟಾವ್ ಮಾಡಿ ರಸ್ತೆಯಲ್ಲಿ ಗುಡ್ಡೆ ಹಾಕಿರುವ ರೈತರು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ‘ ಎಂದರು.

‘ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯದ ಮಾದರಿಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವ ತೀರ್ಮಾನ ಮಾಡಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ ₹ 300 ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಬೆಳೆ ನಷ್ಟ ಹೊಂದಿದ ರೈತರ ಪ್ರತಿ ಎಕರೆ ಭೂಮಿಗೆ ₹ 35 ಸಾವಿರ ಪರಿಹಾರ, 40 ವರ್ಷಗಳಿಂದ ಬಡವರು ಸಾಗುವಳಿ ಮಾಡುವ ಭೂಮಿಗೆ ಪಟ್ಟಾ ಕೊಡಬೇಕು. ಇನ್ನು ಹತ್ತು ಹಲವು ಬೇಡಿಕೆಗಳಿಗಾಗಿ ಸಂಯುಕ್ತ ಹೋರಾಟದ ವೇದಿಕೆ ನೇತೃತ್ವದಲ್ಲಿಡಿ.12ರಂದು ಬೆಳಗಾವಿಯಲ್ಲಿ ರೈತರ ಅಧಿವೇಶನ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ‘ ಎಂದರು.

ವಿವಿಧ ಸಂಘಟನೆಯ ಮುಖಂಡರಾದಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ನಜೀರಸಾಬ್ ಮೂಲಿಮನಿ,ತಿಪ್ಪಯ್ಯ ಹಿರೇಮಠ, ಶರಣು ಗಡ್ಡಿ, ಮಹಾಂತೇಶ ಕೊತಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.