ADVERTISEMENT

ಕುಷ್ಟಗಿ | ಮಳೆನೀರು ಸಂರಕ್ಷಣೆ; ಇಲ್ಲಿ ಕಳಪೆಯೇ ಮಾದರಿ!

ವರ್ಷದೊಳಗೇ ಹಾಳು, ಪುರಸಭೆಯ ಲಕ್ಷಾಂತರ ಹಣ ಪೋಲು

ನಾರಾಯಣರಾವ ಕುಲಕರ್ಣಿ
Published 4 ಜೂನ್ 2023, 1:02 IST
Last Updated 4 ಜೂನ್ 2023, 1:02 IST
ಕುಷ್ಟಗಿ ತಹಶೀಲ್ದಾರ್ ಕಚೇರಿಯ ಕಟ್ಟಡಕ್ಕೆ ಅಳವಡಿಸಿದ್ದ ಮಳೆನೀರು ಸಂರಕ್ಷಣೆ ಕೊಳವೆ ಹಾಳಾಗಿರುವುದು
ಕುಷ್ಟಗಿ ತಹಶೀಲ್ದಾರ್ ಕಚೇರಿಯ ಕಟ್ಟಡಕ್ಕೆ ಅಳವಡಿಸಿದ್ದ ಮಳೆನೀರು ಸಂರಕ್ಷಣೆ ಕೊಳವೆ ಹಾಳಾಗಿರುವುದು   

ಕುಷ್ಟಗಿ: ಮಳೆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿ ಪುನರ್ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿಯ ಪುರಸಭೆ ಮತ್ತು ತಹಶೀಲ್ದಾರ್ ಕಚೇರಿ ಕಟ್ಟಡಗಳಿಗೆ ಅಳವಡಿಸಿದ್ದ ಮಳೆ ನೀರು ಸಂರಕ್ಷಣೆ ವ್ಯವಸ್ಥೆ ವರ್ಷದೊಳಗೇ ಹಾಳಾಗಿರುವುದು ಕಂಡುಬಂದಿದೆ.

ಚಾವಣಿ ಮೇಲಿನ ಪ್ರತಿ ಹನಿ ನೀರನ್ನೂ ಜೋಪಾನವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕಚೇರಿಗೆ ಬರುವ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪುರಸಭೆ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಯ ಕಟ್ಟಡಗಳಲ್ಲಿ ಪುರಸಭೆ ಎಂಟು– ಹತ್ತು ತಿಂಗಳ ಹಿಂದಷ್ಟೇ ಕಾಮಗಾರಿ ಕೈಗೊಂಡಿತ್ತು. ಆದರೆ ಕಳಪೆ ಕಾಮಗಾರಿಯೇ ಇಲ್ಲಿ ಸಾರ್ವಜನಿಕರಿಗೆ ಮಾದರಿಯಾಗಿರುವುದು ವಿಪರ್ಯಾಸವಾಗಿದೆ.

2020-21ನೇ ವರ್ಷದ 15ನೇ ಹಣಕಾಸು ಯೋಜನೆಯ ₹9 ಲಕ್ಷ ಅನುದಾನದಲ್ಲಿ ಈ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿ ಟೆಂಡರ್‌ ಪಡೆದವರ ಹೆಸರಿನಲ್ಲಿ ಹಾಲಿ ಸದಸ್ಯರೊಬ್ಬರು ಬೇನಾಮಿಯಾಗಿ ಕಾಮಗಾರಿ ನಿರ್ವಹಿಸಿದ್ದರು. ಶಿಥಿಲ ಕಟ್ಟಡ, ಬೇಕಾಬಿಟ್ಟಿಯಾಗಿ ಕಾಮಗಾರಿ ಕೈಗೊಂಡಿರುವ ಕುರಿತು ಆರಂಭದಲ್ಲಿಯೇ ಸಾರ್ವಜನಿಕರು ಆಕ್ಷೇಪಿಸಿದ್ದರು. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದರು.

ADVERTISEMENT

ಮಳೆಗಾಲ ಆರಂಭವಾಗುವ ಮೊದಲೇ ತಹಶೀಲ್ದಾರ್ ಕಚೇರಿ ಕಟ್ಟಡದ ಕೊಳವೆ ಕಿತ್ತುಹೋಗಿವೆ. ಪುರಸಭೆ ಕಚೇರಿಯಲ್ಲಿ ನಡೆಸಿರುವ ಕಾಮಗಾರಿಯೂ ಕಳಪೆಯಾಗಿದ್ದು ಚಾವಣಿ ಮೇಲೆ ಸಾವಿರಕ್ಕೂ ಅಧಿಕ ಕೆಟ್ಟ ಟ್ಯೂಬ್‌ ಲೈಟ್‌ಗಳ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಹನಿ ನೀರು ಸಂಗ್ರಹವಾಗದೇ ಕಟ್ಟಡವೇ ಹಾಳಾಗುತ್ತಿದೆ. ನೆಲದಲ್ಲಿ ನಿರ್ಮಾಣಗೊಂಡಿರುವ ನೀರಿನ ಗುಂಡಿಗಳು ಇದ್ದೂ ಇಲ್ಲದಂತಾಗಿವೆ. ಮಳೆ ನೀರು ಸಂಗ್ರಹಿಸಿ ಕಚೇರಿಯ ಶೌಚಾಲಯ, ಮೂತ್ರಾಲಯಗಳು ಹಾಗೂ ಗಿಡಗಂಟಿಗಳಿಗೆ ಬಳಕೆ ಮಾಡುವಂತಿದ್ದರೂ ಇಲ್ಲಿ ಅದರ ಉದ್ದೇಶವೇ ಮೂಲೆಗುಂಪಾಗಿದೆ.

ಕಚೇರಿಗೆ ಬರುವ ಸಾರ್ವಜನಿಕರು ಇದೂ ಒಂದು ಮಳೆ ನೀರು ಸಂರಕ್ಷಣೆ ಮಾದರಿಯೇ ಎಂದೇ ಪ್ರಶ್ನಿಸುವಂತಾಗಿದೆ ಎಂದು ಪಟ್ಟಣದ ವೀರೇಶಗೌಡ, ದೋಟಿಹಾಳದ ಮೆಹಬೂಬಸಾಬ್ ಇತರರು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಕಚೇರಿಗಳಲ್ಲೇ ಇಂಥ ಕಳಪೆ ಮಾದರಿ ಕಾಮಗಾರಿ ನಡೆದಿದ್ದರೂ ಕಂದಾಯ ಇಲಾಖೆ, ಪುರಸಭೆ ಅಧಿಕಾರಿಗಳು ಮತ್ತು ಪುರಸಭೆಯ ಒಬ್ಬ ಪ್ರತಿನಿಧಿಯೂ ಚಕಾರ ಎತ್ತದಿರುವುದು ಅಚ್ಚರಿ ಮೂಡಿಸಿದೆ.

ಮಳೆನೀರು ಕೊಯ್ಲು ಕೆಲಸ ನಡೆದ ಪುರಸಭೆ ಚಾವಣಿ ಮೇಲೆ ಟ್ಯೂಬ್‌ಲೈಟ್‌ ತ್ಯಾಜ್ಯ

ಕಾಮಗಾರಿ ಮೊದಲೇ ನಡೆದಿತ್ತು. ಕೆಲಸದ ಸಧ್ಯದ ಸ್ಥಿತಿ ಮತ್ತು ಬಿಲ್‌ ಪಾವತಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ

-ಧರಣೇಂದ್ರಕುಮಾರ್ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.