ADVERTISEMENT

ಕೊಪ್ಪಳ | ಆತ್ಮಶುದ್ಧಿ ಹೊಂದುವ ಮಾಸ ‘ರಂಜಾನ್‌’

ರೋಜಾ ನಂತರ ಶ್ರದ್ಧಾಳುಗಳ ಮನೆಯಲ್ಲಿ ಸಾಮೂಹಿಕ ಸಹಭೋಜನ: ಬಡವರಿಗೆ ದಾನ

ಸಿದ್ದನಗೌಡ ಪಾಟೀಲ
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಇಫ್ತಿಯಾರ್ ಉಪಹಾರದ ತಟ್ಟೆಗಳಲ್ಲಿ ಇಸ್ಲಾಂ ಸಂದೇಶ ಸಾರುವ ಉಕ್ತಿಗಳನ್ನು ಹಣ್ಣುಗಳ ಮೂಲಕ ಜೋಡಿಸಿದ್ದು ಗಮನ ಸೆಳೆಯಿತು – ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಇಫ್ತಿಯಾರ್ ಉಪಹಾರದ ತಟ್ಟೆಗಳಲ್ಲಿ ಇಸ್ಲಾಂ ಸಂದೇಶ ಸಾರುವ ಉಕ್ತಿಗಳನ್ನು ಹಣ್ಣುಗಳ ಮೂಲಕ ಜೋಡಿಸಿದ್ದು ಗಮನ ಸೆಳೆಯಿತು – ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಇಸ್ಲಾಂ ಧರ್ಮದಲ್ಲಿ ರಂಜಾನ್ ತಿಂಗಳು ಅತ್ಯಂತ ಪವಿತ್ರ. ಉಪವಾಸ, ಪ್ರಾರ್ಥನೆ ಮೂಲಕ ಆತ್ಮಶುದ್ಧೀಕರಣದ ಜೊತೆಗೆ ಜಗತ್ತಿನ ಸಂಕಷ್ಟ ಅರಿತು ಜೀವನ ಸಾರ್ಥಕ ಮಾಡಿಕೊಳ್ಳುವ ಪೂಜ್ಯನೀಯ ತಿಂಗಳು.

ಕಲ್ಮ,ನಮಾಜ್, ಹಜ್, ರೋಜಾ, ಜಕಾತ್ ಇವು ಇಸ್ಲಾಂನ ಮೂಲ ತತ್ವಗಳು. ಇಸ್ಲಾಂನ 12 ತಿಂಗಳುಗಳಲ್ಲಿ ರಮ್ಜಾನ್ ಮಾಸಕ್ಕೆ ತುಂಬಾ ವಿಶೇಷತೆ ಇದೆ. ದೇವರ ಮೂಲ ವಚನ ಪಠಣ (ಕಲ್ಮ), ಐದು ಹೊತ್ತು ಪ್ರಾರ್ಥನೆ (ನಮಾಜ್), ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ (ರೋಜಾ), ತಾವು ಸತ್ಯ ಶುದ್ಧ ಕಾಯಕದಿಂದ ದುಡಿದ ಹಣದಲ್ಲಿ ಬಡವರಿಗೆ ಸಹಾಯ ಮಾಡುವುದೇ (ಜಕಾತ್), ಕೊನೆಗೆ ಹಜ್ ಯಾತ್ರೆ ಧರ್ಮದ ತತ್ವಗಳು. ಶಾಂತಿ, ಸಹಬಾಳ್ವೆ, ಸಹಭೋಜನಕ್ಕೆ ಧರ್ಮದಲ್ಲಿ ಪ್ರಾಶಸ್ತ್ಯವಿದೆ.

ಕೊರೊನಾ ಲಾಕ್‌ಡೌನ್ ಸರಳ ಆಚರಣೆ: ಶತಮಾನಗಳಿಂದ ರಂಜಾನ್ ಹಬ್ಬವನ್ನು ಧಾರ್ಮಿಕ ವಿಧಿವಿಧಾನ ಅನುಸಾರ ಅನುಸರಿಸಿಕೊಂಡು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು. ತಿಂಗಳ ಕೊನೆಗೆ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಂಧು, ಬಳಗ, ಸ್ನೇಹಿತರು, ನೆರೆಹೊರೆಯವರು ಕೂಡಿ ಸಹಭೋಜನ ಮಾಡುತ್ತಿದ್ದಾರೆ.

ADVERTISEMENT

ಆದರೆ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟಕರವಾದ ಈ ಸಂದರ್ಭದಲ್ಲಿ ಅನೇಕ ಆಸ್ತಿಕ ಮುಸ್ಲಿಂರು ಮನೆಯಲ್ಲಿಯೇ ಸಹರಿ, ಇಫ್ತಾರ್ ನಮಾಜ್ ಪೂರೈಸಿದ್ದಾರೆ. ಕೊನೆಯ ದಿನದಂದು ಈದ್ಗಾದಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಈಸಾರಿ ಇಲ್ಲ.

ನಗರದ ಸಂಪಿ ಲಿಂಗಣ್ಣ ರಸ್ತೆಯಲ್ಲಿರುವ ಸಾದಿಕ್ ಅಲಿ ಮತ್ತು ಸಹೋದರರ ಕುಟುಂಬ ಮನೆಯಲ್ಲಿ ರಮ್ಜಾನ್ ಸಿದ್ಧತೆಗೆ ತೊಡಗಿಸಿಕೊಂಡಿತ್ತು. ದಿನದ ಕಾಯಕ ಮುಗಿಸಿ ಮನೆ ಮಂದಿಯಲ್ಲಿ ಶುಚಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಇಫ್ತಾರ್ ಆಚರಣೆ ಮಾಡಿದರು.

ಕುಟುಂಬದಹಿರಿಯರಾದಎಂ.ಎಚ್.ಜಾಗೀರದಾರ್ ಮಾತನಾಡಿ, ‘ಪ್ರತಿವರ್ಷದಂತೆ ಕಟ್ಟುನಿಟ್ಟಿನ ರೋಜಾ ವ್ರತ ಕೈಗೊಂಡಿದ್ದೇವೆ. ಆದರೆ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಲು ಆಗಲಿಲ್ಲ. ಹೀಗಾಗಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದೆವು’ ಎಂದು ಹೇಳಿದರು.

‘ಉಪವಾಸ ಇದ್ದು, ಇನ್ನೊಬ್ಬರ ಹೊಟ್ಟೆ ಹಸಿವಿನ ಕಷ್ಟವನ್ನು ಅರಿತುಕೊಳ್ಳುವುದು ಒಂದೆಡೆಯಾದರೆ, ಆರೋಗ್ಯದ ದೃಷ್ಟಿಯಿಂದಲೂ ಉಪವಾಸ ಅತ್ಯಂತ ಪರಿಣಾಮಕಾರಿ. ರೋಜಾದ ಮೂಲಕ ಇದು ಆತ್ಮಶುದ್ಧಿಗೆ ರಹದಾರಿಯಾಗುತ್ತದೆ. ರಂಜಾನ್ ಮುಸ್ಲಿಂ ಧರ್ಮಿಯರಿಗೆ ಅತ್ಯಂತ ಪವಿತ್ರ. ಈ ವರ್ಷದ ಸಂದೇಶವೇ ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ’ ಎಂದು ಆತೀಖ್ ವಿವರಿಸಿದರು.

ರೋಜಾ ನಂತರದ ಇಫ್ತಾರ್ ಉಪಹಾರಕ್ಕೆ ಒಣಹಣ್ಣುಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಅದರಲ್ಲಿಯೂ ಖರ್ಜೂರಿ, ದ್ರಾಕ್ಷಿ, ಗೊಂಡಂಬಿ, ಬಾದಾಮಿ, ಮನೂಕಾ ಸೇರಿದಂತೆ ವಿವಿಧ ಹಣ್ಣುಗಳು, ವಿಶೇಷ ಬಿರಿಯಾನಿ, ತರೇವಾರಿ ಕುರುಕಲು ಪದಾರ್ಥಗಳು ಇಫ್ತಾರ್ ಸಮಯದಲ್ಲಿ ಸವಿಯಲು ಸಾಲಾಗಿ ಜೋಡಿಸಿಡಲಾಗಿತ್ತು.

ಇರ್ಫಾನ್ ಅಹಮ್ಮದ್ ಜಾಗೀರದಾರ್, ಅಶ್ಫಾಕ್, ಅತೀಕ್ ಮತ್ತು ಆರೀಫ್ಸೇರಿದಂತೆ ಕುಟುಂಬದ ಮಹಿಳೆಯರು ಸಾಮೂಹಿಕವಾಗಿ ಉಪಹಾರ ಸೇವಿಸಿದರು.

*
ಕೊರೊನಾ ವೈರಸ್ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಸಾರಿ ಮನೆಯಲ್ಲಿಯೇ ಎಲ್ಲ ಧಾರ್ಮಿಕ ವಿಧಿ ವಿಧಾನ ಅನುಸರಿಸಿದ್ದೇವೆ. ಕುಟುಂಬದ ಜೊತೆ ಸಹಭೋಜನ ಅತ್ಯಂತ ತೃಪ್ತಿ ತರುತ್ತದೆ.
-ಸಾದಿಕ್ ಅಲಿ, ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.