ಅತ್ಯಾಚಾರ
ಸಾಂದರ್ಭಿಕ ಚಿತ್ರ
ಕೊಪ್ಪಳ: ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ವಿನೋದ ಕೊತಬಾಳ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು ಅಪರಾಧಿಗೆ 20 ವರ್ಷ ಜೈಲು ಮತ್ತು ₹10 ಸಾವಿರ ದಂಡ ವಿಧಿಸಿ ಇಲ್ಲಿನ ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಆದೇಶಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಲೋಗಲ್ ಗ್ರಾಮ ಸೀಮಾದ ಜಮೀನೊಂದರಲ್ಲಿ ಬಾಲಕಿ ತನ್ನ ಗೆಳತಿಯೊಂದಿಗೆ ಬಯಲು ಬಹಿರ್ದೆಸೆಗೆ ಹೋದಾಗ ವಿನೋದ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬ ಬಾಲಕಿಗೆ ಬೆದರಿಕೆಯೊಡ್ಡಿ ಕರೆದುಕೊಂಡು ಹೋಗಿದ್ದಾರೆ. ಆಗ ವಿನೋದ ಅತ್ಯಾಚಾರ ಎಸಗಿದ್ದಾನೆ.
ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಾಲಕಿಯ ಗೆಳತಿಯನ್ನು ಹೆದರಿಸಿ ತನ್ನ ಹತ್ತಿರ ನಿಲ್ಲಿಸಿಕೊಂಡಿದ್ದ. ಬಾಲಕಿ ಚೀರಾಡುವ ಧ್ವನಿ ಕೇಳಿ ಗ್ರಾಮದ ಜನ ಓಡಿ ಬಂದಾಗ ಆರೋಪಿ ವಿನೋದ ಹಾಗೂ ಬಾಲಕ ಅಲ್ಲಿಂದ ಓಡಿ ಹೋಗಿದ್ದರು. ಮನೆಯಲ್ಲಿ ವಿಷಯ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ ಮತ್ತು ಅತ್ಯಾಚಾರ ಎಸಗಿದ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಷ್ಟಗಿ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.