ADVERTISEMENT

ಕೊಪ್ಪಳ | ರೆಡ್‌ಕ್ರಾಸ್‌ ಸಮಾಜಮುಖಿ ಸಂಸ್ಥೆ

ಕುಷ್ಟಗಿ ವೈದ್ಯಾಧಿಕಾರಿ ಡಾ.ಕೆ.ಎಸ್‌.ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 5:25 IST
Last Updated 9 ಜನವರಿ 2022, 5:25 IST
ಕುಷ್ಟಗಿಯಲ್ಲಿ ರೆಡ್‌ಕ್ರಾಸ್‌ ವತಿಯಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು
ಕುಷ್ಟಗಿಯಲ್ಲಿ ರೆಡ್‌ಕ್ರಾಸ್‌ ವತಿಯಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು   

ಕುಷ್ಟಗಿ: ಯುದ್ಧದ ಸಮಯದಲ್ಲಿ ಗಾಯಾಳುಗಳಿಗೆ ತಾರತಮ್ಯವಿಲ್ಲದೆ ನೆರವಾಗುವ ನಿಟ್ಟಿನಲ್ಲಿ ಜನ್ಮತಳೆದ ವಿಶ್ವವ್ಯಾಪಿಯಾಗಿರುವ ರೆಡ್‌ಕ್ರಾಸ್‌ ಸಂಘಟನೆ ವಿವಿಧ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ ಎಂದು ಇಲ್ಲಿಯ ಸರ್ಕಾರಿ ಆಸ್ಪತ್ರೆ ಮುಖ್ಯವೈದ್ಯ ಡಾ.ಕೆ.ಎಸ್‌.ರೆಡ್ಡಿ ಹೇಳಿದರು.

ರೆಡ್‌ಕ್ರಾಸ್‌ ಸಂಸ್ಥೆ ‘ಜೀವನ ಆಸರೆ’ ಯೋಜನೆ ಅಡಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದರಿಗೆ ನೆರವಾಗಲು ಮತ್ತು ಸೋಂಕಿಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಹೊಲಿಗೆ ಯಂತ್ರ ಹಾಗೂ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಲು ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ನೆಲೆಗಟ್ಟಿನಲ್ಲಿ ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡಿರುವುದು ಶ್ಲಾಘನೀಯ ಎಂದರು.

ತಾಲ್ಲೂಕು ರೆಡ್‌ಕ್ರಾಸ್‌ ಘಟಕದ ಪ್ರಧಾನ ಕಾರ್ಯದರ್ಶಿ ವೈದ್ಯ ಡಾ.ರವಿಕುಮಾರ ದಾನಿ ಮಾತನಾಡಿ, ರಕ್ತದಾನ ಶಿಬಿರಗಳನ್ನು ನಡೆಸುವುದರ ಜೊತೆಗೆ ರೆಡ್‌ಕ್ರಾಸ್‌ ಸಂಸ್ಥೆ ಬಡವರು, ಅಸಹಾಯಕರಿಗೆ ನೆರವಾಗುವ ರೀತಿಯಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದೆ. ಕೋವಿಡ್‌ ಕಾರಣಕ್ಕೆ ಅನೇಕ ಕುಟುಂಬಗಳು ಸಂದಿಗ್ಧ ಪರಿಸ್ಥಿತಿಗೆ ತಲುಪಿದವು, ಬಹಳಷ್ಟು ಜನರು ಪ್ರಾಣ ಕಳೆದುಕೊಂಡಿದ್ದರಿಂದ ಅನೇಕ ಕುಟುಂಬಗಳು ಬೀದಿಪಾಲಾದವು. ಅಂಥ ಕೆಲವು ಕುಟುಂಬಗಳಿಗೆ ನೆರವಾಗಲು ಜೀವನ ಆಸರೆ ಯೋಜನೆಯಲ್ಲಿ ನೆರವು ನೀಡಲಾಗಿದೆ ಎಂದರು.

ADVERTISEMENT

ರೆಡ್‌ಕ್ರಾಸ್‌ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ವಿಜಯಕುಮಾರ್ ಬಿರಾದಾರ ಮಾತನಾಡಿದರು.

ಈ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ 5 ಕುಟುಂಬಗಳಿಗೆ ತಲಾ ₹10 ಸಾವಿರ ಮೊತ್ತದ ಹೊಲಿಗೆ ಯಂತ್ರಗಳು ಹಾಗೂ ಸೋಂಕಿಗೆ ತುತ್ತಾಗಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ 10 ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಾದ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ರೆಡ್‌ಕ್ರಾಸ್ ಘಟಕದ ಉಪಾಧ್ಯಕ್ಷ ಬಸವರಾಜ ವಸ್ತ್ರದ, ಸಹಕಾರ್ಯದರ್ಶಿ ಆರ್.ಟಿ ಸುಬಾನಿ, ಸದಸ್ಯರಾದ ಮಹಾಂತಯ್ಯ ಅರಳೆಲೆಮಠ, ಮಲ್ಲಿಕಾರ್ಜುನ ಬಳಿಗಾರ, ಅಪ್ಪಣ್ಣ ನವಲೆ, ಬಾಲಾಜಿ ಬಳಿಗಾರ ಹಾಗೂ ಸಂಸ್ಥೆಯ ಇತರೆ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.