ADVERTISEMENT

ಬೆಳೆ ಹಾನಿ |ವರದಿ ಕೈಸೇರಿದ ಬಳಿಕ ಪರಿಹಾರ: ಸಚಿವ ತಂಗಡಗಿ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:19 IST
Last Updated 27 ಅಕ್ಟೋಬರ್ 2025, 5:19 IST
ಕಾರಟಗಿ ತಾಲ್ಲೂಕಿನ ವಿವಿಧೆಡೆ ಮಳೆಗೆ ಭತ್ತದ ಬೆಳೆ ಹಾನಿಗೀಡಾಗಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲಿಸಿದರು
ಕಾರಟಗಿ ತಾಲ್ಲೂಕಿನ ವಿವಿಧೆಡೆ ಮಳೆಗೆ ಭತ್ತದ ಬೆಳೆ ಹಾನಿಗೀಡಾಗಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲಿಸಿದರು   

ಕಾರಟಗಿ: ಜಿಲ್ಲೆಯಾದ್ಯಂತ ಮಳೆಯಿಂದ ಬೆಳೆ ಹಾನಿಗೀಡಾಗಿದೆ. ಕಾರಟಗಿ ಹೋಬಳಿಯ 80 ಹೆಕ್ಟೇರ್‌, ಸಿದ್ದಾಪುರ ಹೋಬಳಿ ವ್ಯಾಪ್ತಿಯ 858 ಹೆಕ್ಟೇರ್‌ ಪ್ರದೇಶದಲ್ಲಿಯ ಬೆಳೆ ಹಾನಿಗೀಡಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದಿದೆ. ಹಾನಿಯ ಸಮಗ್ರ ವರದಿ ನೀಡುವಂತೆ ಕಂದಾಯ ಮತ್ತು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಕೈ ಸೇರಿದ ಬಳಿಕ ಸರ್ಕಾರದ ಗಮನಕ್ಕೆ ವಿಷಯ ತಂದು ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲ್ಲೂಕಿನ ವಿವಿಧೆಡೆ ಭತ್ತದ ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಬಳಿಕ ಸಿದ್ದಾಪುರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ತಾಲ್ಲೂಕಿನಲ್ಲಿ ಮಳೆಯ ಹೊಡೆತಕ್ಕೆ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ನೆಲಕ್ಕೊರಗಿ, ಭತ್ತದ ತೆನೆ ನೀರಿನಲ್ಲಿ ತೊಯ್ದು ಮೊಳಕೆ ಒಡೆಯುತ್ತಿದೆ. ಇನ್ನೂ ಕೆಲವೆಡೆ ಭತ್ತ ಕಟಾವು ಯಂತ್ರದಿಂದ ಕಟಾವು ಮಾಡಲಾಗದ ರೀತಿಯಲ್ಲಿ ಬೆಳೆ ನೆಲಕ್ಕುರುಳಿದೆ. ರೈತರಿಗೆ ಬಹಳಷ್ಟು ನಷ್ಟ ಉಂಟಾಗುವ ಸಾಧ್ಯತೆಯಿದೆ’ ಎಂದರು.

ADVERTISEMENT

‘ರೈತರ ಬೆನ್ನಿಗೆ ಸರ್ಕಾರ ಇದೆ. ಯರಡೋಣ, ಉಳೇನೂರು, ಈಳಿಗನೂರು, ಸಿದ್ದಾಪುರ, ಮುಸ್ಟೂರು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿರುವೆ. ಹಾನಿಯ ವಿವರ ಸರ್ಕಾರಕ್ಕೆ ಸಲ್ಲಿಸಿ, ತುರ್ತು ಪರಿಹಾರ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ, ತಾ.ಪಂ ಮಾಜಿ ಸದಸ್ಯರಾದ ಬಸವರಾಜ ನೀರಗಂಟಿ, ಪ್ರಕಾಶ್ ಭಾವಿ, ಮುಖಂಡರಾದ ಶರಣೇಗೌಡ ಬೂದಗುಂಪಾ, ಚನ್ನಬಸಪ್ಪ ಸುಂಕದ, ಕೆ.ಸಿದ್ದನಗೌಡ, ಟಿ.ಬೀರಪ್ಪ, ಅಬ್ದುಲ್‌ ರೌಫ್‌, ದೊಡ್ಡಪ್ಪ ದೇಸಾಯಿ, ಅಮರೇಶ ಬರಗೂರು, ನಾಗೇಶ ಸಿಂಧನೂರು, ಪ್ರಮೋದ ಭಾವಿ, ಸಣ್ಣ ಅಗರೆಪ್ಪ, ಎಡಿಸಿ ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ, ಕೃಷಿ ಇಲಾಖೆ ಅಧಿಕಾರಿಗಳಾದ ರುದ್ರೇಶಪ್ಪ, ಅಭಿಲಾಶಾ ಸಿ.ಆರ್., ತಾಪಂ ಇಒ ಲಕ್ಷ್ಮೀದೇವಿ, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ಕಂದಾಯ ನಿರೀಕ್ಷಕ ಶರಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.