ADVERTISEMENT

ಆನೆಗೊಂದಿ: ಪುಷ್ಕರಣಿಗೆ ಮರುಜೀವ ನೀಡಿದ ನರೇಗಾ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:50 IST
Last Updated 14 ಜನವರಿ 2022, 5:50 IST
ದುರ್ಗಾದೇವಿ ಬೆಟ್ಟದ ಹಿಂಭಾಗದಲ್ಲಿನ ಸ್ನಾನಘಟ್ಟದ ಪುಷ್ಕರಣಿಯನ್ನು ನರೇಗಾ ಅಡಿ ಅಭಿವೃದ್ದಿ ಪಡಿಸಿರುವುದು
ದುರ್ಗಾದೇವಿ ಬೆಟ್ಟದ ಹಿಂಭಾಗದಲ್ಲಿನ ಸ್ನಾನಘಟ್ಟದ ಪುಷ್ಕರಣಿಯನ್ನು ನರೇಗಾ ಅಡಿ ಅಭಿವೃದ್ದಿ ಪಡಿಸಿರುವುದು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ಬೆಟ್ಟದ ಹಿಂಭಾಗದಲ್ಲಿರುವ ಪುರಾತನ ಸ್ನಾನ ಘಟ್ಟದ ಪುಷ್ಕರಣಿಗೆ ನರೇಗಾ ಯೋಜನೆ ಕಾಮಗಾರಿ ನೂತನ ವೈಭವ ನೀಡಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರೇಗಾ ಯೋಜನೆ ಅಡಿ ₹10 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಪುಷ್ಕರಣಿಗೆ ಜೀವಕಳೆ ತಂದಿದ್ದಾರೆ.

ಒಟ್ಟಾರೆ ಈ ಕಾಮಗಾರಿ 3 ತಿಂಗಳು ನಡೆದಿದ್ದು, ಇದಕ್ಕೆ 1,005 ಮಾನವ ದಿನಗಳನ್ನು ಸೃಜಿಸಲಾಗಿದೆ. ಪುಷ್ಕರಣಿ ಅಭಿವೃದ್ದಿ ಪಡಿಸಲು ನಿತ್ಯ 20 ಜನ ಕೆಲಸ ಮಾಡಿದರೆ, ಇನ್ನೂ ದೇವಸ್ಥಾನದ ಕೆಲ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಪುಷ್ಕರಣಿ ಅಭಿವೃದ್ದಿಗೆ ಶ್ರಮಿಸಿದರು.

ADVERTISEMENT

ಸ್ನಾನಘಟ್ಟದ ಪುಷ್ಕರಣಿಗೆ ಮೊದಲು ಎಡವಿದ್ದ ಕಲ್ಲುಗಳನ್ನು ಸರಿಪಡಿಸಿ, ಸದೃಢವಾಗಿರಲು ಕಲ್ಲುಗಳಿಂದ ಪಿಚ್ಚಿಂಗ್ ಮಾಡಲಾಯಿತು. ನಂತರ ಅದರ ಸುತ್ತ ಸುಂದರವಾಗಿ ಕಾಣಲು, ನಡೆಯಲು, ವೀಕ್ಷಣೆಗೆ ತೆರಳಲು ಅನುಕೂಲವಾಗಲಿ ಎಂದು ನೆಲಹಾಸು ಹಾಕಲಾಗಿದೆ.

ಹಾಗೇಯೆ ಪುಷ್ಕರಣಿಯ ಸುತ್ತ ಚೈನ್ ಲಿಂಕ್ ಫೆಂಚಿಂಗ್ ಜೊತೆಗೆ ಗ್ರೀಲ್ ವರ್ಕ್ ಸಹ ಮಾಡಲಾಗಿದೆ. ಸ್ನಾನಘಟ್ಟದ ಪುಷ್ಕರಣಿ ಕಾಮಗಾರಿ ಪೂರ್ಣವಾದ ನಂತರ, ಎಲ್ಲರಿಗೂ ಸುಂದರವಾಗಿ ಕಾಣುವಂತೆ ವಿವಿಧ ರೀತಿಯ ಬಣ್ಣಗಳನ್ನು ಹಚ್ಚಲಾಗಿದೆ.

ಇಷ್ಟೆಲ್ಲ ಕಾಮಗಾರಿಗಳನ್ನು ಯಂತ್ರೋಪಕರಣ ಸಹಾಯವಿಲ್ಲದೆ ಮಾಡಲಾಗಿದೆ. ಪುಷ್ಕರಣಿ ಬೆಟ್ಟದಲ್ಲಿ ಇರುವ ಕಾರಣ ಅಲ್ಲಿಗೆ ವಾಹನಗಳು ತೆರಳಲು ಅವಕಾಶವಿಲ್ಲ. ಆದರೂ ಕೇವಲ ಮಾನವ ಶಕ್ತಿಯಿಂದಲೇ ಕಾಮಗಾರಿಗೆ ಬೇಕಾಗುವ ಸಿಮೆಂಟ್, ಉಸುಗು, ಕಲ್ಲುಗಳ ಜೊತೆಗೆ ಇತರೆ ವಸ್ತು ಹೊತ್ತೊಯ್ದು ಕೆಲಸ ಮಾಡಲಾಗಿದೆ.

ಇಂದು ಉದ್ಘಾಟನಾ ಕಾರ್ಯಕ್ರಮ

ಗಂಗಾವತಿ: ತಾಲ್ಲೂಕಿನ‌ ಆನೆಗೊಂದಿ ಸಮೀಪದ ದುರ್ಗಾದೇವಿ ಬೆಟ್ಟದ ಹಿಂಬದಿ ಇರುವ ಪುರಾತನ ಕಲ್ಯಾಣಿಯನ್ನು ಜ.14ರಂದು ಬೆಳಿಗ್ಗೆ 10ಕ್ಕೆ ಶಾಸಕ ಪರಣ್ಣ ಮುನವಳ್ಳಿ, ಜಿ‌.ಪಂ ಸಿಇಓ ಫೌಜಿಯಾ ತರುನ್ನಮ್ ಅವರು ಗಂಗೆ ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ತಿಳಿಸಿದ್ದಾರೆ.

*ಪುಷ್ಕರಣಿ ನಿರ್ಮಿಸಲಾದ ಹಳೆಯ ಕಲ್ಲುಗಳು ಒಂದೊಂದು 3 ಟನ್ ಭಾರ ಹೊಂದಿದ್ದವು. ಅವುಗಳನ್ನು ಮಾನವ ಶಕ್ತಿ ಮತ್ತು ಚೈನ್ ಕ್ರೇನ್ ಬಳಸಿ, ಕಲ್ಲುಗಳು ಎತ್ತಿ ನಿರ್ಮಿಸಲಾಗಿದೆ

– ಕೃಷ್ಣಪ್ಪ, ಪಿಡಿಒ, ಆನೆಗೊಂದಿ

*ಅಂಜನಾದ್ರಿ ಭಾಗದಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳಗಳಿದ್ದು, ಅದರಲ್ಲಿ ದುರ್ಗಾದೇವಿ ಸ್ನಾನಘಟ್ಟದ ಪುಷ್ಕರಣಿ ದುರಸ್ತಿಯಾಗಿತ್ತು. ಇದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಿದ ಕಾರಣ, ಅದಕ್ಕೆ ಮರುಜೀವ ನೀಡಲೆಂದು ನರೇಗಾ ಯೋಜನೆ ಬಳಸಿ, ಅಭಿವೃದ್ದಿ ಪಡಿಸಲಾಗಿದೆ.

– ಡಾ.ಡಿ.ಮೋಹನ್, ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.