ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾಗುತ್ತಿರುವ ಹೊಸ ಕ್ರೆಸ್ಟ್‌ಗೇಟ್ ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ನಿಗದಿಯ ಅವಧಿಯಲ್ಲಿಯೇ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ₹10 ಕೋಟಿ ವಾಪಸ್ ಪಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ತಂಗಡಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕ್ರೆಸ್ಟ್‌ಗೇಟ್ ಅಳವಡಿಕೆಗೆ ಕರ್ನಾಟಕ ನೀಡಿದ ಹಣವನ್ನು ವಾಪಸ್ ಪಡೆದಿದೆ ಎಂದು ಆಧಾರರಹಿತವಾಗಿ ಹೇಳಿಕೆ ನೀಡಲಾಗಿದೆ. ಹೀಗೆ ಹೇಳಿದವರು ದಾಖಲೆಗಳನ್ನು ಕೊಡಲಿ. ಕೇಂದ್ರದಿಂದ ಪ್ರತಿವರ್ಷವೂ ತುಂಗಭದ್ರಾ ಮಂಡಳಿಗೆ ಎಲ್ಲ ರಾಜ್ಯಗಳ ಪಾಲಿನ ಅನುದಾನ ಬರುತ್ತದೆ. ಅದೇ ಹಣದ ಬುಕ್ ಅಡ್ಜೆಸ್ಟ್‌ಮೆಂಟ್‌ನಿಂದ ಪ್ರತಿವರ್ಷ ಹಣ ಪಾವತಿಯಾಗುತ್ತದೆ. ಮೊದಲ ಬಾರಿಗೆ ಕರ್ನಾಟಕ ₹10 ಕೋಟಿ ಕೊಟ್ಟಿದೆ’ ಎಂದು ತಿಳಿಸಿದರು.
‘ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ಉತ್ತಮ ಎಂಜಿನಿಯರ್. ಆದರೆ ಅವರಿಗೆ ರಾಜ್ಯಗಳು ನೀಡಿದ ಹಣದ ಬಗ್ಗೆ ಮಾಹಿತಿ ಕೊರತೆಯಿದೆ. ಗೇಟ್‌ಗಳ ಅಳವಡಿಕೆ ಮಾಡಿದ ಗುತ್ತಿಗೆದಾರರಿಗೆ ಈಗಾಗಲೇ ₹11 ಕೋಟಿ ಪಾವತಿಸಲಾಗಿದ್ದು, ಮಂಗಳವಾರ (ಜ. 27) ಇನ್ನೂ ₹3.80 ಕೋಟಿ ನೀಡಲಾಗುವುದು. ವೇಳಾಪಟ್ಟಿಯಂತೆಯೇ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ನಡೆಯುತ್ತಿದೆ’ ಎಂದು ಹೇಳಿದರು.
ಈ ವಿಚಾರದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಇದರ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು. ಈಗಾಗಲೇ 18ನೇ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದ್ದು, ಇದೇ ತಿಂಗಳ 30ರ ಒಳಗೆ 4, 11, 19, 20 ಹಾಗೂ 27 ಗೇಟ್ ಅಳವಡಿಕೆ ಮುಗಿಯಲಿದೆ’ ಎಂದರು.
‘ಬಿಜೆಪಿ ನಾಯಕರು ಇರುವುದೇ ವಿನಾಕಾರಣದ ಆರೋಪಗಳನ್ನು ಮಾಡಲು. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪಾದಯಾತ್ರೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ವಾಸ್ತವ ತಿಳಿದುಕೊಳ್ಳದೆ ಆರೋಪ ಮಾಡುವವರಿಗೆ ಏನು ಹೇಳಬೇಕು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.