
ಮಹಾಂತೇಶ ದರಗದ
ಕೊಪ್ಪಳ: ‘ರಾಷ್ಟ್ರೀಯ ಲೋಕ್ ಅದಾಲತ್ ಮಾ. 14ರಂದು ನಡೆಯಲಿದ್ದು, ತಮ್ಮ ಇಲಾಖೆಯಿಂದ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಅಧಿಕಾರಿಗಳು ಹೇಳಿದರು.
ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಜೊತೆಗಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ಬಹಳಷ್ಟು ಜನರಿಗೆ ಕಾನೂನಿನ ಅರಿವೇ ಇಲ್ಲ. ಈ ಕುರಿತು ನಾವೆಲ್ಲರೂ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ಲೋಕ ಅದಾಲತ್ ನಡೆಯುತ್ತಿರುವ ಕುರಿತು ಹೆಚ್ಚಿನ ಪ್ರಚಾರ ನೀಡಿ. ನಗರಸಭೆ ವಾಹನಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಚಾರದ ಮೂಲಕ ಜನರಿಗೆ ತಿಳಿಸಬೇಕು’ ಎಂದು ನಿರ್ದೇಶನ ನೀಡಿದರು.
'ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥವಾದರೆ ಜನರ ಸಮಯ ಮತ್ತು ಅವರ ಸಂಬಂಧಗಳು ಉಳಿಯುತ್ತವೆ. ಈ ಸಲ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕಾಗುತ್ತದೆ’ ಎಂದು ಹೇಳಿದರು.
ಕೊಪ್ಪಳ ತಹಶೀಲ್ದಾರ್ ಬಸವರಾಜ, ಪರಿಸರ ಇಲಾಖೆ ಅಧಿಕಾರಿ ವೈ.ಎಸ್. ಹರಿಶಂಕರ್, ಅಬಕಾರಿ ಉಪಾಧೀಕ್ಷಕ ಆಂಜನೇಯ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಜಿ., ಕಾರ್ಮಿಕ ಇನ್‌ಸ್ಟೆಕ್ಟರ್ ಮಂಜುಳಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.