ಕಾರಟಗಿ: ‘ಪ್ರಜಾಪ್ರಭುತ್ವದ 4ನೇ ಕಂಬದಂತೆ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆ. ಪತ್ರಕರ್ತರು ತಮ್ಮ ಜವಬ್ದಾರಿಯನ್ನು ಅರಿತು ವಾಸ್ತವಾಂಶವನ್ನೇ ಬಿಂಬಿಸುವ, ಪರಿಣಾಮ ಬೀರುವ ಸ್ಪಷ್ಟ ಸುದ್ದಿಗಳನ್ನೇ ಮಾಡಬೇಕು. ಸರ್ಕಾರದ ಕಣ್ತೆರೆಸುವ, ಸರ್ಕಾರವನ್ನೇ ಬದಲಾಯಿಸುವ ಶಕ್ತಿ ಪತ್ರಿಕೆಗಳಿಗಿದ್ದು ವಸ್ತುನಿಷ್ಟ ವರದಿ ನೀಡಬೇಕು’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಗ್ರಾಮೀಣ ಸಂತೆ ಮೈದಾನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
‘ಅನೇಕ ಐಎಎಸ್, ಐಪಿಎಸ್, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಮ್ಮ ಯಶಸ್ಸಿಗೆ ‘ಪ್ರಜಾವಾಣಿ’ ಪತ್ರಿಕೆ ಕಾರಣವಾಗಿದೆ. ಸ್ಫರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ, ಯಶ ಸಾಧಿಸಲು ಪತ್ರಿಕೆ ತುಂಬಾ ನೆರವಾಗಿದೆ. ಪುಟ ತುಂಬಿಸಲು ರೋಚಕ ಸುದ್ದಿ ಪ್ರಕಟಿಸುವುದು ಪತ್ರಿಕೆಗಳ ಕೆಲಸವಲ್ಲ. ಕೆಲ ಪತ್ರಿಕೆಗಳು ಇದನ್ನು ಚಾಚೂತಪ್ಪದೇ ಪಾಲಿಸುತ್ತಿರುವುದು ಅವುಗಳ ಘನತೆ ಹೆಚ್ಚಿಸಿದೆ’ ಎಂದರು.
ಪ್ರಮುಖರಾದ ಶಿವರೆಡ್ಡಿ ನಾಯಕ, ಬಿಲ್ಗಾರ ನಾಗರಾಜ್ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ‘ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರು ತಮ್ಮ ಜವಬ್ದಾರಿತನ ಅರಿತು ಸುದ್ದಿ ಮಾಡಬೇಕು. ಸುದ್ದಿ ಸಮಾಜದ, ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ತೆರೆಸುವಂತಿರಬೇಕು’ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಎ. ಜಿ. ಕಾರಟಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರತ ಪತ್ರಕರ ಸಂಘದ ಅಧ್ಯಕ್ಷ ಸಿದ್ದನಗೌಡ ಹೊಸಮನಿ ಅಧ್ಯಕ್ಷತೆ ಹಿಸಿದ್ದರು. ಈಚೆಗೆ ನಿಧನರಾಗಿದ್ದ ಶರಣೇಗೌಡ ಗೊರೇಬಾಳಗೆ ಶ್ರದ್ದಾಂಜಲಿ ಸಲ್ಲಿಸಿ, ಮೌನ ಆಚರಿಸಲಾಯಿತು. ಪತ್ರಕರ್ತ ಕೋಟ್ಯಾಳ ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೇಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸಿಡಿಪಿ ವಿರುಪಾಕ್ಷಿ, ಪತ್ರಕರ್ತರಾದ.ಎಚ್.ಚಾಂದಸಿಂಗ್, ದಿಗಂಬರ್ ಎನ್. ಕುರ್ಡೇಕರ್ ಪ್ರಮುಖರಾದ ಮೌನೇಶ ಡಧೇಸೂಗೂರು, ಎನ್. ಶ್ರೀನಿವಾಸ, ಅಯ್ಯಪ್ಪ ಉಪ್ಪಾರ, ನಾಗರಾಜ್ ಅರಳಿ, ಮಹ್ಮದ್ ರಫಿ, ಶಶಿಧರಗೌಡ, ಚನ್ನಬಸಪ್ಪ ಸುಂಕದ, ಪರಕಿ ಶರಣಪ್ಪ, ಮರಿಯಪ್ಪ ಸಾಲೋಣಿ ಉಪಸ್ಥಿತರಿದ್ದರು.
ಸಿದ್ದಾಪುರ ಕಸ್ತೂರಬಾ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮೆಹಬೂಬ ಕಿಲ್ಲೇದಾರ ನಾಡಗೀತೆ, ರೈತ ಗೀತೆ ಹಾಡಿದರು. ಶಿಕ್ಷಕಿ ಅಂಭ್ರಮ್ಮ ಕಾರ್ಯಕ್ರಮ ನಿರ್ವಹಿಸಿದರು.
‘ಸಿಎಂ ಜತೆ ಚರ್ಚೆ’ ‘ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಜಿ ಕರೆಯದೇ ಪ್ರಾಮಾಣಿಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆಯ ಬಗ್ಗೆ ಸಿಎಂ ಬಳಿ ಚರ್ಚಿಸಿರುವೆ. ಶೀಘ್ರವೇ ನಿರ್ಧಾರ ಪ್ರಕಟವಾಗಲಿದೆ. ಈ ಬಾರಿ ಪತ್ರಿಕೆಗಳ ವಿತರಕರಿಗೆ ಪ್ರಶಸ್ತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಸಮಾಜದ ತುಳಿತಕ್ಕೊಳಗಾದ ಅಸಹಾಯಕರಾಗಿರುವ ಸೌಲಭ್ಯಗಳಿಂದ ವಂಚಿತರಾದವರಿಗೆ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡಬೇಕು. ಪತ್ರಕರ್ತರಿಗೆ ನಿವೇಶನ ನೀಡುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ಶಾಶ್ವತತಾದ ಪತ್ರಿಕಾ ಭವನದ ನಿರ್ಮಾಣಕ್ಕೆ ಸರ್ಕಾರದ ಹಾಗೂ ವೈಯಕ್ತಿಕ ನೆರವನ್ನು ನಿಮ್ಮ ಬೇಡಿಕೆಯಂತೆ ನೀಡಲು ಸದಾ ಸಿದ್ಧ’ ಎಂದು ತಂಗಡಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.