ADVERTISEMENT

ಗಂಗಾವತಿ: ಅವೈಜ್ಞಾನಿಕ ರಸ್ತೆ ಉಬ್ಬು, ಸುಗಮ ಸಂಚಾರಕ್ಕೆ ಅಡ್ಡಿ -ಸವಾರರಿಗೆ ಕಂಟಕ

​ಪ್ರಜಾವಾಣಿ ವಾರ್ತೆ
Published 25 ಮೇ 2022, 5:06 IST
Last Updated 25 ಮೇ 2022, 5:06 IST
ಗಂಗಾವತಿ ತಾಲ್ಲೂಕಿನ ಲಲಿತ್ ಮಹಲ್ ಹೊಟೇಲ್ ಎದುರು ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು
ಗಂಗಾವತಿ ತಾಲ್ಲೂಕಿನ ಲಲಿತ್ ಮಹಲ್ ಹೊಟೇಲ್ ಎದುರು ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು   

ಗಂಗಾವತಿ: ಗಂಗಾವತಿ ನಗರದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ.

ಗಂಗಾವತಿ-ಹುಲಗಿ ಮಾರ್ಗದಲ್ಲಿ ಬರುವ ಪ್ರತಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ 5 ರಿಂದ 6 ರಸ್ತೆ ಉಬ್ಬುಗಳನ್ನು ಹಾಕಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಈ ಮಾರ್ಗದ ಪ್ರಯಾಣ ತುಂಬಾ ಪ್ರಯಾಸಕರವಾಗಿದೆ.

ಈ ಮಾರ್ಗದಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಪಘಾತ ನಿಯಂತ್ರಿಸಲು ಹಾಕಿರುವ ರಸ್ತೆ ಉಬ್ಬುಗಳಿಂದಲೇ ಹೆಚ್ಚು ಅಪಘಾತಗಳಾಗುತ್ತಿವೆ. ಕೆಲವೊಮ್ಮೆ ರಸ್ತೆ ಉಬ್ಬು ಕಾಣದೆ ಹತ್ತಿರ ಹೋಗಿ, ಬ್ರೇಕ್ ಹಾಕಿದಾಗ ಹಿಂದಿನ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ.

ADVERTISEMENT

ರಸ್ತೆ ಉಬ್ಬುಗಳನ್ನು ಎಷ್ಟು ಎತ್ತರಕ್ಕೆ ಹಾಕಬೇಕು, ಎಲ್ಲಿ ಹಾಕಬೇಕು, ಹಾಕಿದ ನಂತರ ಯಾವ ಸೂಚನೆಗಳು ಪಾಲಿಸಬೇಕು ಎನ್ನುವ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹಾಕಿರುವುದರಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

100 ರಸ್ತೆ ಉಬ್ಬುಗಳು:ಗಂಗಾವತಿ ನಗರದಿಂದ ಹುಲಿಗೆ ಗ್ರಾಮಕ್ಕೆ ತೆರಳುವ ಶಿವಪುರ ರಸ್ತೆ ಹಾಗೂ ಅಗಳಕೇರಾ ರಸ್ತೆ ಮಾರ್ಗದಲ್ಲಿ 100 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಸಂಗಾಪುರ ಗ್ರಾಮವೊಂದರಲ್ಲಿ 10, ಸಾಣಾಪುರ ಗ್ರಾಮದಲ್ಲಿ 7 ರಸ್ತೆ ಉಬ್ಬುಗಳಿವೆ. ಇನ್ನೂ ಪ್ರತಿ ಗ್ರಾಮದಲ್ಲಿ 5-6 ಉಬ್ಬುಗಳಿವೆ.

ಸಾರಿಗೆ ಬಸ್‌ಗಳ ಪ್ಲೇಟ್ ಕಟ್:ಹುಲಿಗಿ-ಗಂಗಾವತಿ ಮಾರ್ಗದಲ್ಲಿ ಸಾಕಷ್ಟು ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಕೆಲ ಬಾರಿ ರಸ್ತೆ ಉಬ್ಬುಗಳಿಗೆ ಬಸ್‌ನ ನಂಬರ್‌ ಪ್ಲೇಟ್ ತಗುಲಿ ಮುರಿದ ಘಟನೆಗಳು ನಡೆದಿವೆ.

ಆಸ್ಪತ್ರೆ ತಲುಪಲು ಪ್ರಯಾಸ: ಹುಲಿಗಿ, ಹರ್ಲಾಪುರ, ಬಸಾಪುರ, ಸಾಣಾಪುರ, ಚಿಕ್ಕರಾಂಪುರ ಗ್ರಾಮದ ಜನರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ತೆರಳಬೇಕಾಗುತ್ತದೆ. ತುರ್ತಾಗಿ ಜೀವ ಉಳಿಸಿಕೊಳ್ಳಲು ಗಂಗಾವತಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ, ಆ ವ್ಯಕ್ತಿ ರಸ್ತೆ ಉಬ್ಬುಗಳನ್ನು ದಾಟಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಲು ಈ ರಸ್ತೆ ಉಬ್ಬುಗಳು ಅಡ್ಡಿಯಾಗಿ ಪರಿಣಮಿಸಿವೆ.

ಅವಾಂತರಕ್ಕೆ ಕಾದ ರಸ್ತೆ ಉಬ್ಬುಗಳು: ಗಂಗಾವತಿ-ಹುಲಿಗಿ ಮಾರ್ಗದಲ್ಲಿ ಸಾಕಷ್ಟು ತಿರುವುಗಳಿದ್ದು, ಈ ಮಾರ್ಗದ ಮೂಲಕವೇ ಕೊಪ್ಪಳ, ಹೊಸಪೇಟೆ, ಹಂಪಿ, ಬಳ್ಳಾರಿಗೆ ಹೋಗಬಹುದು. ಈ ಮಾರ್ಗದಲ್ಲಿ ಬಸ್‌, ಲಾರಿ, ಟ್ರ್ಯಾಕ್ಟರ್, ಬೈಕ್, ಕಾರು, ಲಾರಿಗಳ ಸಂಚಾರ ಹೆಚ್ಚಿದ್ದು ರಸ್ತೆ ಉಬ್ಬುಗಳ ಬಳಿ ವೇಗ ನಿಯಂತ್ರಿಸಲಾಗದೆ ಒಂದಲ್ಲ‌ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ.

ಶಾಲೆ, ದೇವಸ್ಥಾನ, ಬ್ಯಾಂಕ್, ಗ್ರಾಮ ಪಂಚಾಯಿತಿಗಳಿಂದ ನಿರ್ದಿಷ್ಟ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಉಬ್ಬುಗಳು ನಿರ್ಮಿಸಲು ಅವಕಾಶ ಇರುತ್ತದೆ. ಇಂತಹ ಯಾವುದೇ ನಿಯಮಗಳು ಈ ಮಾರ್ಗಕ್ಕೆ ಅನ್ವಯವಾಗಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

*
ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಆದ ಅಪಘಾತಗಳ ಕುರಿತು ಸಾಕಷ್ಟು ದೂರುಗಳು ಬಂದಿವೆ. ಉಬ್ಬುಗಳ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರ ತೆರವುಗೊಳಿಸಲಾಗುವುದು
-ರಾಜಪ್ಪ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಗಂಗಾವತಿ

*
ಹುಲಿಗಿ ಗ್ರಾಮದಿಂದ ಗಂಗಾವತಿ 34 ಕಿ.ಮೀ ಇದ್ದು, ಈ ರಸ್ತೆ ಮಾರ್ಗದಲ್ಲಿನ ಉಬ್ಬುಗಳನ್ನು ದಾಟಿ ಗಂಗಾವತಿ ಹೋಗಬೇಕಾದರೆ 2 ಗಂಟೆ ಸಮಯ ಹಿಡಯುತ್ತದೆ.
-ಸೈಫರ್ ರೆಹಮಾನ್, ಬೈಕ್ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.