ADVERTISEMENT

ಮೈ ಕೊರೆಯುವ ಚಳಿಯ ನಡುವೆಯೂ ಹಳ್ಳಿಗಳಲ್ಲಿ ಮೇಳೈಸಿದ ರೊಟ್ಟಿಹಬ್ಬದ ಸಂಭ್ರಮ

ಗವಿಮಠದ ಜಾತ್ರೆಗೆ ಕನಿಷ್ಠ 15 ಲಕ್ಷ ಜೋಳದ ರೊಟ್ಟಿ ಸಂಗ್ರಹದ ನಿರೀಕ್ಷೆ

ಪ್ರಮೋದ ಕುಲಕರ್ಣಿ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಜೋಳದ ರೊಟ್ಟಿ ತಯಾರಿಸುವ ಕಾರ್ಯದಲ್ಲಿ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದ ಮಹಿಳೆಯರು ತೊಡಗಿದ್ದ ಚಿತ್ರಣ
–ಪ್ರಜಾವಾಣಿ ಚಿತ್ರ/ ಭರತ್‌ ಕಂದಕೂರ
ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಜೋಳದ ರೊಟ್ಟಿ ತಯಾರಿಸುವ ಕಾರ್ಯದಲ್ಲಿ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದ ಮಹಿಳೆಯರು ತೊಡಗಿದ್ದ ಚಿತ್ರಣ –ಪ್ರಜಾವಾಣಿ ಚಿತ್ರ/ ಭರತ್‌ ಕಂದಕೂರ   

ಕೊಪ್ಪಳ: ಮೈ ಕೊರೆಯುವ ಚಳಿಯ ನಡುವೆಯೂ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ‘ರೊಟ್ಟಿ ಹಬ್ಬ’ದ ಸಂಭ್ರಮ ಮನೆ ಮಾಡಿದೆ.    

ಮಹಾರಥೋತ್ಸವಕ್ಕೂ ಮೊದಲು ರೊಟ್ಟಿಯ ಸದ್ದು ಮಾರ್ದನಿಸುತ್ತದೆ. ಗವಿಮಠದ ಜಾತ್ರೆ ಎಂದರೆ ಸುತ್ತಲಿನ ಹಳ್ಳಿಗಳ ಜನರಿಗೆ ತಮ್ಮೂರ ಹಬ್ಬ ಎನ್ನುವ ಸಂಭ್ರಮವಿದೆ. ಗ್ರಾಮದ ದೇವಸ್ಥಾನ ಅಥವಾ ವಿಶಾಲ ಸ್ಥಳಗಳಲ್ಲಿ ಕಟ್ಟಿಗೆ ಒಲೆ ಬಳಸಿ ಜೋಳದ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಈ ಬಾರಿ ಜನವರಿ 5ರಂದು ಮಹಾರಥೋತ್ಸವ ನಡೆಯಲಿದೆ. ಇದಕ್ಕೂ ಮೊದಲು ಗವಿಮಠದಲ್ಲಿ ಜೋಳದ ರೊಟ್ಟಿಗಳ ರಾಶಿಯೇ ಸಂಗ್ರಹವಾಗುತ್ತದೆ. ಪ್ರತಿವರ್ಷ ಕನಿಷ್ಠ 15 ಲಕ್ಷ ರೊಟ್ಟಿಗಳು ಭಕ್ತರಿಂದಲೇ ಬರುತ್ತಿದ್ದು, ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ರೊಟ್ಟಿ ಸಂಗ್ರಹವಾಗುವ ನಿರೀಕ್ಷೆ ಗವಿಮಠದ್ದಾಗಿದೆ.

ಕೊಪ್ಪಳ ತಾಲ್ಲೂಕಿನ ಕಿನ್ನಾಳ, ಹಟ್ಟಿ ಇರಕಲ್ಲಗಡ ಹೀಗೆ ಅನೇಕ ಊರುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ದುಡಿದು, ದಣಿದು ಬಂದರೂ ಜಾತ್ರೆಗೆ ರೊಟ್ಟಿ ತಟ್ಟುವ ಸೇವೆಗೆ ಮಾತ್ರ ಮಹಿಳೆಯರಿಗೆ ಯಾವ ದಣಿವೂ ಆಗುವುದಿಲ್ಲ. ಪ್ರತಿ ಊರಿನಿಂದ ಕನಿಷ್ಠ 10ರಿಂದ 15 ಸಾವಿರ ರೊಟ್ಟಿಗಳು ತಯಾರಾಗಿ ಅವುಗಳನ್ನು ಮೆರವಣಿಗೆ ಮೂಲಕ ಗವಿಮಠಕ್ಕೆ ನೀಡಲಾಗುತ್ತದೆ. 

ADVERTISEMENT

ಹಟ್ಟಿ ಗ್ರಾಮದಲ್ಲಿ 2013ರಿಂದ ಸಾರ್ವಜನಿಕವಾಗಿ ರೊಟ್ಟಿ ತಯಾರಿಸುವ ಪರಂಪರೆ ಆರಂಭವಾಗಿತ್ತು. ಕೋವಿಡ್‌ ಕಾಲದಲ್ಲಿ ನಿಂತಿದ್ದು, ಮಹಿಳೆಯರು ಮನೆಗಳಲ್ಲಷ್ಟೇ ರೊಟ್ಟಿ ತಯಾರಿಸಿ ಬಳಿಕ ಮಠಕ್ಕೆ ತಂದುಕೊಡುತ್ತಿದ್ದರು. ಆ ಗ್ರಾಮದಲ್ಲಿ ಮೂರು ವರ್ಷದ ಬಳಿಕ ರಾತ್ರಿ ವೇಳೆ ರೊಟ್ಟಿ ತಟ್ಟುವ ಕಾಯಕ ನಡೆಯಿತು. ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಗ್ರಾಮಕ್ಕೆ ಭೇಟಿ ನೀಡಿ ರೊಟ್ಟಿ ತಟ್ಟುವ ಮಹಿಳೆಯರ ಕಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಣ ಹೊಂದಿಕೆ ಹೇಗೆ?: ಗ್ರಾಮಸ್ಥರು ಸಾಧ್ಯವಾದಷ್ಟು ಹಣ ಸಂಗ್ರಹಿಸಿ ರೊಟ್ಟಿ ತಯಾರಿಸಲು ಸಾಮಗ್ರಿ ಖರೀದಿಸುತ್ತಾರೆ. ಅನುಕೂಲಸ್ಥರು ಕ್ವಿಂಟಲ್‌ ಲೆಕ್ಕದಲ್ಲಿ ಜೋಳ ಕೊಡುತ್ತಾರೆ. ಈ ವರ್ಷ ಹಟ್ಟಿಯಲ್ಲೇ ಎರಡೂವರೆ ಕ್ವಿಂಟಲ್‌ನಷ್ಟು ಜೋಳದ ರೊಟ್ಟಿ ತಯಾರಿಸಲಾಗಿದೆ.  

ಜಾತ್ರೆ ನೆಪದಲ್ಲಿ ಎಲ್ಲ ಸಮುದಾಯಗಳ ಜನರು ಒಂದಾಗಿ ರೊಟ್ಟಿ ತಯಾರಿಸಿ ಭಾವೈಕ್ಯದ ಸಂದೇಶವನ್ನು ಸಾರುತ್ತಿದ್ದಾರೆ. ಇದು ಊರ ಜನರ ನಡುವಿನ ಬಾಂಧವ್ಯವನ್ನೂ ಗಟ್ಟಿಗೊಳಿಸಿದೆ. ಗ್ರಾಮದ ಅಭಿವೃದ್ಧಿಗೂ ವೇದಿಕೆ ಒದಗಿಸುತ್ತಿದೆ.

ಅಭಿನವ ಗವಿಸಿದ್ಧೇಶ್ವರ ಶ್ರೀ
ಗವಿಮಠದ ಜಾತ್ರೆ ಸಮೀಪಿಸುತ್ತಿದ್ದರೆ ಹಳ್ಳಿಗಳಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಜೋರಾಗುತ್ತದೆ. ನಮ್ಮೂರಿನಿಂದಲೇ ಸುಮಾರು 10ರಿಂದ 15 ಸಾವಿರ ರೊಟ್ಟಿ ಮಠಕ್ಕೆ ನೀಡುತ್ತೇವೆ
ರಾಮಣ್ಣ ಚೌಡ್ಕಿ ಹಟ್ಟಿ ಗ್ರಾಮದ ಮುಖಂಡ
ಹಟ್ಟಿ ಗ್ರಾಮದಲ್ಲಿ ರೊಟ್ಟಿ ತಟ್ಟುವುದು ಶುರುವಾದರೆ ಜಾತ್ರೆ ಆರಂಭವಾದಂತೆ. ಭಕ್ತರ ಪ್ರೀತಿ ಭಕ್ತರ ಮಠದ ಮೇಲಿನ ಭಕ್ತಿಗೆ ಏನು ಹೇಳಿದರೂ ಕಡಿಮೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.