ಕುಷ್ಟಗಿ: ಮೂಲತಃ ಕಾಯಕ ಮತ್ತು ಶ್ರಮಜೀವಿಗಳಾಗಿರುವ ಕ್ಷತ್ರೀಯ ಸಮುದಾಯದ ಜನರ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಅಗತ್ಯವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಎಸ್‌ಎಸ್‌ಕೆ ಸಮಾಜದ ವತಿಯಿಂದ ಏರ್ಪಡಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತಿ, ಧಾರ್ಮಿಕ ಆಚರಣೆಗೆ ಚಾಲನೆ ನೀಡಿದ ಅವರು, ಈ ಸಮುದಾಯದ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದರು.
ಸಮುದಾಯದ ವತಿಯಿಂದ ನಿರ್ಮಿಸಲಾಗುತ್ತಿರುವ ಅಂಬಾಭವಾನಿ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ₹ 5 ಲಕ್ಷ ಅನುದಾನ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಹೇಳಿದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಎಸ್‌ಎಸ್‌ಕೆ ಸಮುದಾಯದ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನಂತರ ಸಂಸದ ಮತ್ತು ಶಾಸಕರನ್ನು ಸಮುದಾಯದ ಹಿರಿಯರು ಸನ್ಮಾನಿಸಿದರು.
ಎಸ್‌ಎಸ್‌ಕೆ ಸಮಾಜದ ಗೌರವ ಅಧ್ಯಕ್ಷ ಪರಶುರಾಮ ನಿರಂಜನ, ಅಧ್ಯಕ್ಷ ರವಿಂದ್ರ ಬಾಕಳೆ, ಪ್ರಮುಖರಾದ ರಮೇಶ ಕಾಪ್ಸೆ, ಡಾ. ರವಿಕುಮಾರ್ ದಾನಿ, ವೆಂಕಟೇಶ ಕಾಟವಾ, ರಾಜಣಸಾ ಕಾಟವಾ, ಕೇಶವ ಕಾಟವಾ, ಆನಂದ ರಾಯಬಾಗಿ, ಶಂಕರ ರಾಯಬಾಗಿ, ಪ್ರಭಾಕರ ಸಿಂಗ್ರಿ ಸೇರಿದಂತೆ ಎಸ್‌ಎಸ್‌ಕೆ ಸಮಾಜ ಸಂಘಟನೆಯ ಹಿರಿಯರು, ಮಹಿಳೆಯರು ಸೇರಿದಂತೆ ಬಹಳಷ್ಟು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾಜದ ಯುವಕ ಸಂಘದ ವತಿಯಿಂದ ಬೈಕ್ ಜಾಥಾ ನಡೆಸಲಾಯಿತು. ಅನೇಕರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಹಿಳಾ ಸಂಘದ ಪದಾಧಿಕಾರಿಗಳು ಸಹಸ್ರಾರ್ಜುನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.