ADVERTISEMENT

ವಿವಾದ ಅಂತ್ಯಕ್ಕೆ ಸಂತ ಸಮಾವೇಶ

ಆಂಜನೇಯನ ಜನ್ಮಸ್ಥಳ: ಮುಖ್ಯ ಅರ್ಚಕ ವಿದ್ಯಾದಾಸ ಬಾಬಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:36 IST
Last Updated 25 ಏಪ್ರಿಲ್ 2021, 4:36 IST
ವಿದ್ಯಾದಾಸ ಬಾಬಾ
ವಿದ್ಯಾದಾಸ ಬಾಬಾ   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಆಂಜನೇಯನ ಜನ್ಮಸ್ಥಳದ ಕುರಿತು ಎದ್ದಿರುವ ವಿವಾದದ ಬಗ್ಗೆ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಸಂತ ಸಮಾವೇಶ ನಡೆಸಿ ಟಿಟಿಡಿ ವಾದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಅಂಜನಾದ್ರಿ ಆಂಜನೇಯ ದೇವಸ್ಥಾನದ ಮುಖ್ಯ ಅರ್ಚಕ ವಿದ್ಯಾದಾಸ ಬಾಬಾ ಹೇಳಿದರು.

‘ತಿರುಪತಿ ಬಳಿಯ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ ಎಂದು ನಿರೂಪಿಸಲು ಯಾವ ಆಧಾರದ ಮೇಲೆ ಹೊರಟಿದ್ದಾರೆ ಎಂಬುದನ್ನು ಅವರು ದಾಖಲೆ ಸಮೇತ ಸಮರ್ಥಿಸಬೇಕು. ಅದಕ್ಕೆ ಸಮಾವೇಶದಲ್ಲಿ ಅವಕಾಶ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

‘ಸಂತ ಸಮಾವೇಶದಲ್ಲಿ 2 ಸಾವಿರಕ್ಕೂ ಹೆಚ್ಚು, ಮಾಧ್ವ, ವೈಷ್ಣವ, ಶ್ರೀವೈಷ್ಣವ, ಶೈವ ಪಂಥದ ವಿವಿಧ ಸ್ವಾಮೀಜಿಗಳು ಭಾಗವಹಿಸಿ ಜನ್ಮಸ್ಥಳ ಕುರಿತು ಮಾತನಾಡುವರು. ಮಹಾಕಾವ್ಯ, ಪುರಾಣ, ಸ್ಥಳ
ಪುರಾಣ, ಐತಿಹ್ಯ, ಶಾಸನ, ಹೊತ್ತಿಗೆಗಳ ದಾಖಲೆ ನೀಡುತ್ತೇವೆ. ನಿರ್ಣಯ ಅಂಗೀಕರಿಸಿ ವಿವಾದಕ್ಕೆಅಂತ್ಯ ಹಾಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು 2013ರಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇಲ್ಲಿನ ಸ್ಥಳದ ಮಹಿಮೆ ಅರಿತು ಹರಕೆ ಹೊತ್ತಿದ್ದ ಮೋದಿ ಅವರ ಪತ್ನಿ ಜಶೋಧಾ ಬೆನ್, ಮೋದಿ ಸಹೋದರ ಪಂಕಜ್ ಮೋದಿ, ನಿತಿನ್ ಗಡ್ಕರಿ ಅವರು ಇಲ್ಲಿಗೆ ಬಂದು 524 ಮೆಟ್ಟಿಲುಗಳನ್ನು ಏರಿ ಹರಕೆ ತೀರಿಸಿದ್ದರು’ ಎಂದು ಬಾಬಾ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.