ADVERTISEMENT

ಯಲಬುರ್ಗಾ: ಶಾಲೆಗೆ ಹೋಗಲು ಹಳ್ಳ ದಾಟಲೇ ಬೇಕು!

ಯಲಬುರ್ಗಾ ತಾಲ್ಲೂಕಿನ ಕೊನಸಾಗರ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:48 IST
Last Updated 8 ಆಗಸ್ಟ್ 2025, 6:48 IST
ಯಲಬುರ್ಗಾ ತಾಲ್ಲೂಕು ಕೊನಸಾಗರ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ನೆರವು ಪಡೆದು ದಾಟಿದರು
ಯಲಬುರ್ಗಾ ತಾಲ್ಲೂಕು ಕೊನಸಾಗರ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ನೆರವು ಪಡೆದು ದಾಟಿದರು   

ಯಲಬುರ್ಗಾ: ತಾಲ್ಲೂಕಿನ ಕೊನಸಾಗರ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮಳೆ ಬಂದಾಗಲೆಲ್ಲ ಶಾಲೆಯ ಪಕ್ಕದಲ್ಲಿರುವ ಹಳ್ಳವನ್ನು ದಾಟಿಕೊಂಡೇ ಶಾಲೆಗೆ ಹೋಗಿ ಬರಬೇಕು.

ಸರಿಯಾದ ರಸ್ತೆಯಿಲ್ಲದ ಕಾರಣ ಹಳ್ಳದ ದಾಟಿ ಹೋಗಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ನೀರಿನ ಹರಿವು ಮತ್ತು ಸೆಳವು ಕಡಿಮೆಯಾಗುವವರೆಗೂ ಕಾಯ್ದು ನಂತರ ಹಳ್ಳ ದಾಟಿ ಮನೆ ಮತ್ತು ಶಾಲೆಯನ್ನು ಸೇರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ADVERTISEMENT

‘ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ರೈತ ಮುಖಂಡ ಮಲ್ಲಪ್ಪ ಲಕ್ಕಲಕಟ್ಟಿ ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ 8ರಿಂದ 10ರ ವರೆಗ ತರಗತಿಗಳಿವೆ. 6 ಜನ ಶಿಕ್ಷಕರು, 150ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ.

‘ಉತ್ತಮ ರಸ್ತೆ, ಕಾಂಪೌಂಡ್ ಇಲ್ಲದೇ ಇರುವುದರಿಂದ ಹೆಚ್ಚಿನ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಹೋಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಸಕರು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಸ್ಥಳೀಯ ಮುಖಂಡ ಶರಣಗೌಡ ತಿಮ್ಮನಗೌಡ್ರ ಆಗ್ರಹಿಸಿದ್ದಾರೆ.

ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಶಾಲೆಗೆ ಹೋಗಿಬರಲು ಸೂಕ್ತ ರಸ್ತೆಯಿಲ್ಲ. ಹಳ್ಳ ದಾಟಲೇಬೇಕು. ದೊಡ್ಡ ಮಳೆ ಬಂದರೆ ಹಳ್ಳ ಭರ್ತಿಯಾಗುತ್ತದೆ. ನೀರಿನ ಹರಿವು ಕಡಿಮೆಯಾಗುವವರೆಗೂ ಶಾಲೆಗೆ ಹೋಗುವುದು ಕಷ್ಟ
ಮಹೇಶ ಪಾಟೀಲ 9ನೇ ತರಗತಿ ವಿದ್ಯಾರ್ಥಿ
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತಮ ವಾತಾವರಣ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು
ಮಲ್ಲಪ್ಪ ಲಕ್ಕಲಕಟ್ಟಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.