ADVERTISEMENT

ಅಂತರಂಗ ಶುದ್ಧಿ ಬದಲು ಬಹಿರಂಗ ‘ಸುದ್ದಿ’ಗೇ ಮಹತ್ವ: ಡಾ.ಸಿ.ಸೋಮಶೇಖರ

ವಚನ ಶ್ರವಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:42 IST
Last Updated 18 ಆಗಸ್ಟ್ 2025, 6:42 IST
ಕುಷ್ಟಗಿಯಲ್ಲಿ ನಡೆದ ವಚನ ಶ್ರವಣ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಶರಣಪ್ಪ ಹಾಗೂ ಇತರರು ಇದ್ದರು
ಕುಷ್ಟಗಿಯಲ್ಲಿ ನಡೆದ ವಚನ ಶ್ರವಣ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಉದ್ಘಾಟಿಸಿದರು. ಮಾಜಿ ಶಾಸಕ ಕೆ.ಶರಣಪ್ಪ ಹಾಗೂ ಇತರರು ಇದ್ದರು   

ಕುಷ್ಟಗಿ: ‘12ನೇ ಶತಮಾನದ ಶರಣರು ಕಾಯಕ ಪ್ರಜ್ಞೆಯ ಜೊತೆಗೆ ಅಂತರಂಗ ಶುದ್ಧಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರು. ಆದರೆ, ಈಗಿನ ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಬಹಿರಂಗ ‘ಸುದ್ದಿ’ಗೆ ಹೆಚ್ಚು ಮಹತ್ವ ದೊರೆಯುತ್ತಿರುವುದು ಸಲ್ಲದು’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ತಾಲ್ಲೂಕು ಬಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ವಚನ ಶ್ರವಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,‘ಆಂತರಿಕ ಶುದ್ಧಿ ಬಹಿರಂಗದಲ್ಲೂ ಶುದ್ಧಿಯಾಗಬೇಕು. ಬಸವಾದಿ ಪ್ರಮಥರ ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತವಾಗಿರುತ್ತದೆ. ವಚನಗಳಲ್ಲಿನ ಅಂಶಗಳನ್ನು ಕನಿಷ್ಟದಲ್ಲಾದರೂ ಪರಿಪಾಲನೆ ಮಾಡಬೇಕು’ ಎಂದು ಹೇಳಿದರು.

ಶರಣರ ಅನೇಕ ವಚನಗಳನ್ನು ಉಲ್ಲೇಖಿಸಿ,‘ಶರಣರ ವಚನಗಳಲ್ಲಿ ಅಂತರಂಗ ಶುದ್ಧಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಸರ್ಕಾರಿ ವಕೀಲ ಬಿ.ಎಸ್‌.ಪಾಟೀಲ,‘ವಚನಗಳನ್ನು ಓದಿಕೊಂಡರೇನೆ ನಿಜವಾದ ಬದುಕಿನ ದರ್ಶನವಾಗುತ್ತದೆ. ಅಂತರಂಗದಲ್ಲೊಂದು, ಬಹಿರಂಗದಲ್ಲಿ ಮತ್ತೊಂದು ಎಂಬಂತೆ ಇದ್ದು ಆತ್ಮವಂಚನೆ ಮಾಡಿಕೊಳ್ಳದೆ ನುಡಿದಂತೆ ನಡೆಯುವ ಮೂಲಕ ಆತ್ಮ ಶುದ್ಧಿಕರಣಕ್ಕೆ ಪ್ರಯತ್ನಿಸಬೇಕು’ ಎಂದರು.

ADVERTISEMENT

ಮಾಜಿ ಶಾಸಕ ಕೆ.ಶರಣಪ್ಪ, ದೇವೇಂದ್ರಪ್ಪ ಬಳೂಟಗಿ ಹಾಗೂ ಇತರರು ಮಾತನಾಡಿದರು.

ಬಸವ ಸಮಿತಿ ತಾಲ್ಲೂಕು ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಬಸವರಾಜ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಟರಾಜ ಸೋನಾರ, ಜೀವನಸಾಬ್ ವಾಲಿಕಾರ, ಈರಣ್ಣ ಬಳಿಗಾರ, ಹನುಮೇಶ ಗುಮಗೇರಿ, ನಬಿಸಾಬ್ ಕುಷ್ಟಗಿ, ಉಮೇಶ ಹಿರೇಮಠ, ರವೀಂದ್ರನಾಥ ಬಳಿಗಾರ, ಮಂಜುನಾಥ ಗುಳೇದಗುಡ್ಡ ಇದ್ದರು.

ಮಹೇಶ ಹಡಪದ ನಿರೂಪಿಸಿದರು.

ಚುನಾವಣೆ ಪ್ರಚಾರದ್ದೇ ಮುಖ್ಯ ಅಂಶ:

ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ ಅವರು ಚುನಾವಣೆ ಇನ್ನೂ ಎರಡು ವರ್ಷ ಇದ್ದರೂ ಈಗಲೇ ಅಧಿಕೃತವಾಗಿ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವುದು ಕಂಡುಬಂತು. ವಚನ ಶ್ರವಣ ಕಾರ್ಯಕ್ರಮದಲ್ಲಿಯೇ ಈ ವಿಷಯ ಪ್ರಸ್ತಾಪಿಸಿದ ಅವರು ತಾವು ಕಸಾಪ ಅಧ್ಯಕ್ಷರಾದರೆ ಅನುಷ್ಠಾನಗೊಳಿಸುವ ಪ್ರಮುಖ ಅಂಶಗಳ ಕುರಿತು ವಿವರಿಸಿದರಲ್ಲದೆ ಕರಪತ್ರಗಳನ್ನೂ ಹಂಚಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೆ ಮಾಜಿ ಶಾಸಕರು ಮಠಾಧೀಶರು ಹಾಗೂ ಇತರರ ಮನೆಗಳಿಗೂ ಭೇಟಿ ನೀಡಿ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ತಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು. ಕಳೆದ ಚುನಾವಣೆಯಲ್ಲಿ ತಾಲ್ಲೂಕಿನವರೇ ಆಗಿದ್ದ ಶೇಖರಗೌಡ ಮಾಲಿಪಾಟೀಲರನ್ನು ಬೆಂಬಲಿಸದ ಕೆಲ ವ್ಯಕ್ತಿಗಳು ಈಗ ಸಿ.ಸೋಮಶೇಖರ ಅವರ ಬೆನ್ನು ಬಿದ್ದಿರುವುದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತ್ಯಾಸಕ್ತರಲ್ಲಿ ಅಚ್ಚರಿ ತಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.