ADVERTISEMENT

ಸಚಿವ ತಂಗಡಗಿ ಬೆಂಬಲಿಗರಿಂದಲೇ ಅಕ್ರಮ ಚಟುವಟಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:30 IST
Last Updated 29 ಜನವರಿ 2026, 8:30 IST
ಮಂಜುನಾಥ ಮಸ್ಕಿ
ಮಂಜುನಾಥ ಮಸ್ಕಿ   

ಕಾರಟಗಿ:‌ ‘ಪಟ್ಟಣದಲ್ಲಿ ಇಸ್ಪೀಟ್, ಮಟ್ಕಾ, ಮರಳು ದಂಧೆ ಸಹಿತ ಕಾನೂನುಬಾಹಿರ ಕೃತ್ಯಗಳು ಸಚಿವ ಶಿವರಾಜ ತಂಗಡಗಿ ಆಪ್ತರು, ಬೆಂಬಲಿಗರಿಂದ ನಿರಾತಂಕವಾಗಿ ನಡೆಯುತ್ತಿವೆ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಸಮಸ್ಯೆಗಳ ಬಗ್ಗೆ ಬಿಜೆಪಿಯವರು ಮಾತನಾಡಬಾರದು ಎಂದರೆ ಹೇಗೆ? ಇದು ಕಾಂಗ್ರೆಸ್‍ನ ದಿವಾಳಿತನ ಎತ್ತಿತೋರಿಸುತ್ತದೆ’ ಎಂದು ಬಿಜೆಪಿ ಮುಖಂಡರು ಟೀಕಿಸಿದರು.

ಪಟ್ಟಣದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ‘ಮಾಜಿ ಶಾಸಕ ದಢೇಸೂಗೂರು ಅವರ ವಿರುದ್ಧ ರಾಜಕೀಯ ಟೀಕೆ ಮಾಡುವ ಭರದಲ್ಲಿ ತೇಜೋವಧೆಯ ಹೇಳಿಕೆ ನೀಡುವುದು ಅವರು ತಮ್ಮ ಸ್ಥಾನದ ಗೌರವ ಕುಂದಿಸುತ್ತದೆ ಎಂಬುದನ್ನು ಅರಿಯಬೇಕು’ ಎಂದು ತಂಗಡಗಿ ವಿರುದ್ಧ ಹರಿಹಾಯ್ದರು.

ADVERTISEMENT

‘ದಢೇಸೂಗೂರು ಅಧಿಕಾರದಲ್ಲಿದ್ದಾಗ ಸಚಿವ ಶಿವರಾಜ ತಂಗಡಗಿ ಅವರು ಕ್ಷೇತ್ರದ ತುಂಬೆಲ್ಲ ಮಟ್ಕಾ, ಇಸ್ಪೀಟ್, ಮರಳು ದಂಧೆ ಸೇರಿ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಆರೋಪಿಸುತ್ತಿದ್ದರು. ಈಗ ಅವರ ಪಕ್ಕದಲ್ಲಿರುವವರೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದರೂ ಮೌನವಾಗಿದ್ದಾರೆ’ ಎಂದು ಆರೋಪಿಸಿದರು.

ಕಾರಟಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಯುವ ಮುಖಂಡ ಪ್ರಭುರಾಜ್ ಬೂದಿ, ದೇವರಾಜ್‌ ನಾಯಕ, ಆನಂದ ಎಂ. ಮಾತನಾಡಿ, ‘ಸಚಿವರ ಸುತ್ತ ಇರುವವರೇ ಅಂದರ್ ಬಾಹರ್ ಆಡಿಸುತ್ತಿದ್ದು, ಬಂದ್‌ ಮಾಡಿಸಲು ಮುಂದಾಗಲಿ. ಮರಳು, ಮಟ್ಕಾ ದಂಧೆಯ ಹಿಂದೆ ಸಚಿವರ ಬೆಂಗಲಿಗರೇ ಇದ್ದು, ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅಕ್ರಮ ದಂಧೆಗಳಿಗೆ ಸಚಿವರು ಶೀಘ್ರ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಬಿಜೆಪಿಯವರು ಎಸ್‌ಪಿ, ಐಜಿ ಕಚೇರಿಗೂ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮುಖಂಡ ಉಮೇಶ ಭಂಗಿ, ಗ್ರಾಪಂ ಮಾಜಿ ಸದಸ್ಯ ಗಂಗಪ್ಪ ಕೆಂಗೇರಿ, ಹನುಮಂತಪ್ಪ ಹಗೇದಾಳ, ಅಮರೇಶ ನಾಯಕ ಇದ್ದರು.

ಶರಣೇಗೌಡ ಮಾಲಿಪಾಟೀಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.