ADVERTISEMENT

ಹಣ ಕೊಳ್ಳೆ ಹೊಡೆದವನಿಂದ ಹೇಳಿಸಿಕೊಳ್ಳಬೇಕೆ?: ನಿಂದನೆ ‍ಪ್ರಕರಣದ ಬಗ್ಗೆ ತಂಗಡಗಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 16:03 IST
Last Updated 25 ಆಗಸ್ಟ್ 2024, 16:03 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೀರಾಳ ಕಲ್ಗುಡಿಯಲ್ಲಿ ಭಾನುವಾರ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ’ಹಕ್ಕುಪತ್ರ ನೀಡುವುದಾಗಿ ಜನರಿಂದ ಹಣ ಕೊಳ್ಳೆ ಹೊಡೆದವನಿಂದ ಹೇಳಿಸಿಕೊಳ್ಳಬೇಕೇ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಂಗಡಗಿ ಗ್ರಾಮಕ್ಕೆ ತೆರಳಿದ್ದಾಗ ಕಲ್ಗುಡಿ ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಕುಣಿಕೇರಿ ಹಾಗೂ ಮತ್ತೊಬ್ಬ ಸದಸ್ಯೆಯ ಪತಿ ಪಾಮಣ್ಣ ಚಲವಾದಿ ರಸ್ತೆ ಸೌಲಭ್ಯ ಕಲ್ಪಿಸಿ ಎಂದು‌ ಕೇಳಿಕೊಂಡಾಗ ಅವರನ್ನು ಸಚಿವರು ನಿಂದಿಸಿದ ವಿಡಿಯೊ ವೈರಲ್‌ ಆಗಿವೆ.

‘ಯಲ್ಲಪ್ಪ ಹಕ್ಕು ಪತ್ರ ಕೊಡುತ್ತೇನೆಂದು ನಂಬಿಸಿ ಜನರಿಂದ ಹಣ ಲೂಟಿ ಹೊಡೆದಿದ್ದಾನೆ. ಕಳ್ಳತನ ಪ್ರಕರಣವೊಂದರಲ್ಲಿ ನಾಪತ್ತೆಯಾದ ವಸ್ತುಗಳನ್ನು ವಾಪಸ್‌ ಕೊಡಿಸುವುದಾಗಿ ಹೇಳಿ ಪೊಲೀಸರಿಂದಲೇ ಹಣ ಪಡೆದುಕೊಂಡಿದ್ದಾನೆ. ಆತನ ಸಲುವಾಗಿ ಊರಿನ ಜನರಿಗೆ ಸಾಕಾಗಿ ಹೋಗಿದ್ದು, ಊರಿನವರೇ ನನ್ನ ಮುಂದೆ ದೂರು ಹೇಳಿದ್ದಾರೆ’ ಎಂದು ತಂಗಡಗಿ ಆರೋಪಿಸಿದರು.

ADVERTISEMENT

ಕಾಗೆ ಬಂದು ಕೋಗಿಲೆಗೆ ತನ್ನ ಬಣ್ಣದ ಬಗ್ಗೆ ಹೇಳಿದಂತೆ ಗ್ರಾಮ ಪಂಚಾಯಿತಿ ಸದಸ್ಯನಿಗೆ ಮಾಜಿ ಶಾಸಕ ಬಸವರಾಜ ದಢೇಸೂಗೂರು ಜೊತೆಯಾಗಿದ್ದಾನೆ. ಅಧಿಕಾರದಲ್ಲಿದ್ದ ಐದೂ ವರ್ಷ ದಢೇಸುಗೂರು ದರ್ಪ ನಡೆಸಿ ಈಗ ನನಗೆ ಬುದ್ಧಿವಾದ ಹೇಳಲು ಬಂದಿದ್ದಾನೆ ಎಂದು ತಿರುಗೇಟು ನೀಡಿದರು.

‘ನಿತ್ಯ ಜನರ ನಡುವೆ ಇದ್ದು ಕೆಲಸ ಮಾಡುತ್ತೇನೆ. ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಕು ಬೇಡಗಳನ್ನು ಆಲಿಸುತ್ತೇನೆ. ಯಾರಿಗೆ ಏನು ಮಾತನಾಡಬೇಕು ಎನ್ನುವ ಸಾಮಾನ್ಯ ಜ್ಞಾನ ನನಗಿದೆ. ದಢೇಸೂಗೂರಗೆ ಬುದ್ಧಿ ಇಲ್ಲ. ಜೀರಾಳ ಕಲ್ಗುಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಗೊತ್ತಿದ್ದು, ಎಲ್ಲವನ್ನೂ ಪರಿಹರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.