
ಕುಕನೂರು: ‘ಸಿದ್ದರಾಮಯ್ಯನವರು ಮಹಿಳೆಯರಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದಂತೆ ಮೋದಿಯವರಿಗೆ ಉಚಿತ ರೈಲ್ವೆ ಮಾಡಿ ಎಂದು ಪತ್ರ ಬರೆಯಿರಿ’ ಎಂದು ಮಹಿಳೆಯರನ್ನ ಉದ್ದೇಶಿಸಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ರಾಜೂರು, ಆಡೂರು, ದ್ಯಾಂಪೂರು, ಮಸಬಹಂಚಿನಾಳ ಗ್ರಾಮಗಳಲ್ಲಿ ಹಮ್ಮಿಕೊಂಡ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
‘ಪಟ್ಟಣಕ್ಕೆ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಡಯಾಲೀಸಿಸ್ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದ್ದು ಇದರಿಂದ ನಮ್ಮ ತಾಲ್ಲೂಕಿನ ಜನತೆಗೆ ದೂರದ ನಗರಗಳಿಗೆ ತೆರಳುವುದು ತಪ್ಪುತ್ತದೆ. ಪಟ್ಟಣದ ಕಲ್ಯಾಣ ಮಂಟಪವನ್ನು ₹ 4 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡುತ್ತಿದ್ದು ಬಡವರಿಗೆ ಮದುವೆ ಮಾಡಲು ಕಡಿಮೆ ದರದಲ್ಲಿ ದೊರೆಯುವುದರಿಂದ ತುಂಬಾ ಅನುಕೂಲವಾಗಲಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಹೊರೆ ಕಡಿಮೆಯಾಗಿದ್ದು ಅವರ ಜೀವನಮಟ್ಟ ಸುಧಾರಿಸುತ್ತಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ, ವಿದ್ಯಾನಿಧಿ ಯೋಜನೆಗಳಿಂದ ಸಾರ್ವಜನಿಕರ ಆರ್ಥಿಕ ಮಟ್ಟ ಹೆಚ್ಚಾಗುತ್ತಿದ್ದು ತಲಾ ವರಮಾನ ಹೆಚ್ಚಾಗಿದೆ’ ಎಂದರು.
‘ಅಭಿವೃದ್ಧಿಯೇ ನನ್ನ ಆದ್ಯ ಕರ್ತವ್ಯವೆಂದು ನಿರಂತರ 35 ವರ್ಷಗಳಿಂದ ಯಲಬುರ್ಗಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೇನೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನಾನು ನಿಮ್ಮ ಆಶೀರ್ವಾದದೊಂದಿಗೆ ಇನ್ನೂ 15 ವರ್ಷ ಕ್ಷೇತ್ರದ ಅಭಿವೃದ್ಧಿ ಮಾಡಲಿಕ್ಕೆ ನೀವು ನನಗೆ ಆಶೀರ್ವಾದ ಮಾಡುತ್ತೀರಿ. ಏಕೆಂದರೆ ನಿಮ್ಮ ಸೇವೆಯೇ ನನ್ನ ಪ್ರಥಮ ಕರ್ತವ್ಯ’ ಎಂದರು.
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಡಿಡಿಪಿಯು ಜಗದೀಶ್ ಎಚ್., ಕರಿಬಸಪ್ಪ ನಿಡುಗುಂದಿ, ಮಲ್ಲಿಕಾರ್ಜುನ, ಪಂಚಾಯತ್ ರಾಜ್ ಇಲಾಖೆ ಎಇಇ ರಾಜಶೇಖರ ಮಳಿಮಠ, ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಲಿಂಗನಗೌಡ, ಸಂಗಮೇಶ ಗುತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.