ADVERTISEMENT

ಕಥನ ಶೈಲಿಯಿಂದ ಕಾದಂಬರಿ ಜನಪ್ರಿಯ: ಸಾಹಿತಿ ಎ.ಎಂ.ಮದರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:22 IST
Last Updated 19 ಅಕ್ಟೋಬರ್ 2025, 6:22 IST
ಕೊಪ್ಪಳದ ಭಾಗ್ಯನಗರದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು ಪಾಲ್ಗೊಂಡಿದ್ದರು
ಕೊಪ್ಪಳದ ಭಾಗ್ಯನಗರದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು ಪಾಲ್ಗೊಂಡಿದ್ದರು   

ಕೊಪ್ಪಳ: ಇಲ್ಲಿನ ಭಾಗ್ಯನಗರದ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನದಿಂದ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ಸಾಹಿತಿ ಎ.ಎಂ.ಮದರಿ ಅವರು ಮಾತನಾಡಿ ‘ಭೈರಪ್ಪ ಅವರ ಬಹುತೇಕ ಕಾದಂಬರಿಗಳಲ್ಲಿ ಧರ್ಮ ಮತ್ತು ತತ್ವಜ್ಞಾನದ ಆಳವಾದ ವಿಚಾರ ಪ್ರಸ್ತಾಪವಾಗಿವೆ. ಅವರ ಕಲಾತ್ಮಕ ನಿರೂಪಣೆ, ಕಥನ ಶೈಲಿ, ಭಾಷಾ ಕೌಶಲ್ಯದಿಂದ ಅವರ ಕಾದಂಬರಿಗಳು ಸಾಕಷ್ಟು ಜನಪ್ರಿಯವಾಗಿವೆ. ಅನೇಕ ಕಾದಂಬರಿಗಳು ವಿವಿಧ ಭಾಷೆಗಳಲ್ಲಿ ಮರುಮುದ್ರಣ ಕಂಡಿವೆ’ ಎಂದು ಸ್ಮರಿಸಿಕೊಂಡರು.

‘ಅವರ ಎಲ್ಲ ಕಾದಂಬರಿಗಳಲ್ಲಿ ವೈದಿಕ ಮತ್ತು ಹಿಂದೂತ್ವದ ಆಲೋಚನೆಗಳು ಪ್ರಮುಖ ಸ್ಥಾನ ಪಡೆದಿವೆ. ವರ್ತಮಾನಕ್ಕೆ ಮುಖಾಮುಖಿಯಾಗಿ ಜನಪರವಾದ, ಪ್ರಗತಿಪರವಾದ ಆಲೋಚನೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿಲ್ಲ. ಭಾವನಾತ್ಮಕ ನೆಲೆಯಲ್ಲಿ ಅವರ ಕಥನ ಕಲೆ ಹೆಚ್ಚು ಆಕರ್ಷಣೀಯವಾಗಿವೆ’ ಎಂದು ಹೇಳಿದರು.

ADVERTISEMENT

ರಾಜಶೇಖರ ಪಾಟೀಲ ಮಾತನಾಡಿ ‘ಭೈರಪ್ಪ ಅವರ ಎಲ್ಲಾ ಕಾದಂಬರಿಗಳು ಮಹತ್ವವಾಗಿವೆ. ಕೇವಲ ಹಿಂದೂತ್ವ ವಾದವನ್ನು ಪುಷ್ಠೀಕರಿಸುವುದಿಲ್ಲ. ವಿಭಿನ್ನ ಆಯಾಮಗಳಿಂದ ಅವುಗಳನ್ನು ನೋಡಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಸಾಹಿತಿಗಳಾದ ವಿಜಯಲಕ್ಷ್ಮಿ ಕೊಟಗಿ, ಈಶ್ವರ ಹತ್ತಿ, ರವಿ ಕಾಂತನವರ್, ಅಲ್ಲಮಪ್ರಭು ಬೆಟ್ಟದೂರು, ಡಿ.ಎಂ.ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.