ADVERTISEMENT

ಸ್ಮಶಾನ ಅಭಿವೃದ್ಧಿಗೆ ಕ್ರಮ: ಅಧ್ಯಕ್ಷ ರಮೇಶ ಹ್ಯಾಟಿ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ, ಅಧ್ಯಕ್ಷ ರಮೇಶ ಹ್ಯಾಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:21 IST
Last Updated 19 ಫೆಬ್ರುವರಿ 2026, 6:21 IST

ಕೊಪ್ಪಳ: ‘ಈಗಾಗಲೇ ಸ್ಮಶಾನಕ್ಕೆ ಕಾಯ್ದಿರಿಸಿದ ಜಮೀನು ವಾರದೊಳಗೆ ಪಂಚಾಯಿತಿ ಹೆಸರಿಗೆ ಪಹಣಿ ಆಗಲಿದ್ದು, ಎಲ್ಲ ಸಮಾಜದ ಅಧ್ಯಕ್ಷರನ್ನೊಳಗೊಂಡ ಸ್ಮಶಾನ ಅಭಿವೃದ್ಧಿ ಸಮಿತಿ ರಚಿಸಿ, ನೀಲನಕ್ಷೆ ಸಿದ್ಧಪಡಿಸಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ ಹೇಳಿದರು‌.

ನಗರದ ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಲ್ಲ 28 ಸಮಾಜದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಿಕೊಂಡು, ಸ್ಮಶಾನ ಅಭಿವೃದ್ಧಿ ಸಮಿತಿ ಮಾಡಬೇಕು. ಸರ್ಕಾರದ ಅನುದಾನದ ಜತೆಗೆ ಎಲ್ಲ ಸಮಾಜದವರ ಸಹಕಾರದೊಂದಿಗೆ ಅಭಿವೃದ್ಧಿ ಮಾಡುತ್ತೇವೆ. ವಿವಿಧ ಸಮಾಜದವರು ಸ್ವಯಂ ಪ್ರೇರಿತರಾಗಿ ವಾಹನ ಕೊಡಿಸುವುದಾಗಿ ತಿಳಿಸಿದ್ದಾರೆ’ ಎಂದರು.

ADVERTISEMENT

ಇದಕ್ಕೆ ಸದಸ್ಯ ಮೋಹನ್ ಅರಕಲ್ಲ್ ಪ್ರತಿಕ್ರಿಯಿಸಿ, ಸ್ಮಶಾನಕ್ಕೆ ಶಾಸಕರು ₹2 ಕೋಟಿ ಕೊಡುತ್ತೇವೆಂದು ಭರವಸೆ ನೀಡಿದ್ದರು’. ಎಂದರು. ಬಳಿಕ ಅಧ್ಯಕ್ಷರು ಮಾತನಾಡಿ, ‘ಒಂದು ವಾರದಲ್ಲಿ ಸ್ಮಶಾನ ಪಂಚಾಯಿತಿ ಹೆಸರಲ್ಲಿ ಆಗಲಿದ್ದು, ಬಳಿಕ ಶಾಸಕರ ಬಳಿ ಹೋಗಿ ಅನುದಾನ ಕೇಳೋಣ ಎಂದು ಸ್ಪಷ್ಟಪಡಿಸಿದರು.

ಪುರಭವನ ಕಟ್ಟಡಕ್ಕೆ ಮಾರ್ಚ್ ನಂತರ ₹5 ಕೋಟಿ ಅನುದಾನ ನೀಡುವುದಾಗಿ ಶಾಸಕ ಕೆ‌‌‌.ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ಪತ್ರವೂ ಬಂದಿದೆ. ಪಕ್ಕದ ಖಾದಿ ಗ್ರಾಮೋದ್ಯೋಗ ಮಂಡಳಿಗೆ ನೀಡಿದ್ದ ಜಾಗವನ್ನೂ ಹಿಂಪಡೆದರೆ, ಅನುಕೂಲ ಆಗಲಿದೆ. ಇದಕ್ಕೆ ಕ್ರಮ ವಹಿಸಲಾಗುತ್ತಿದೆ‌’ ಎಂದರು.

ಪತ್ರಕರ್ತ ದಿ.ವಿಠ್ಠಪ್ಪ ಗೋರಂಟ್ಲಿ ಹೆಸರನ್ನು ಪಟ್ಟಣದ ಗಾಂಧೀಜಿ ವೃತ್ತದಿಂದ ಅವರ ಮನೆಗೆ ತೆರಳುವ ಬಜಾರ ರಸ್ತೆಗೆ ನಾಮಕರಣ ಮಾಡುವಂತೆ ಸದಸ್ಯ ಸವಿತಾ ಗೋರಂಟ್ಲಿ ತಿಳಿಸಿದ್ದು, ಇದಕ್ಕೆ ಅಧ್ಯಕ್ಷರು ಮತ್ತು ಸದಸ್ಯರು ಒಪ್ಪಿಗೆ ನೀಡಿದರು.

ಪಟ್ಟಣಕ್ಕೆ ಕ್ರೀಡಾಂಗಣ ಮಂಜೂರು ಮಾಡುವಂತೆ ಸದಸ್ಯ ಗವಿಸಿದ್ದಪ್ಪ ಮಗಿಮಾವಿನಳ್ಳಿ ಒತ್ತಾಯಿಸಿದರು. ಸದಸ್ಯ ಪರಶುರಾಮ ನಾಯಕ್, ಉಪಾಧ್ಯಕ್ಷ ಹೊನ್ನುರಸಾಬ್ ಬೈರಾಪುರ, ಮುಖ್ಯಾಧಿಕಾರಿ ಸುರೇಶ ಬಬಲಾದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.