ADVERTISEMENT

ಕುಷ್ಟಗಿ | ಧೂಮಪಾನ: ಮಾಹಿತಿ ನೀಡಿದ ವಿದ್ಯಾರ್ಥಿಯ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 16:42 IST
Last Updated 27 ನವೆಂಬರ್ 2023, 16:42 IST
   

ಕುಷ್ಟಗಿ: ಪಟ್ಟಣದ ಖಾಸಗಿ ಶಾಲೆಗೆ ಸೇರಿದ ಕೆಲ ಮಕ್ಕಳು ಧೂಮಪಾನ, ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

ಸಹಪಾಠಿಗಳು ಸಿಗರೇಟ್‌ ಸೇದುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದ ಎನ್ನಲಾದ ಅದೇ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ಅದೇ ಶಾಲೆಯ ಕೆಲ ವಿದ್ಯಾರ್ಥಿಗಳು ಮತ್ತು ಪಟ್ಟಣದ ಇತರೆ ಬಾಲಕರು ಸೇರಿ ಸೋಮವಾರ ರಾತ್ರಿ ಪಟ್ಟಣದ ಕೃಷ್ಣಗಿರಿ ಕಾಲೊನಿಯ ಬಳಿ ಥಳಿಸಿದ್ದಾರೆ. 

ಗುಂಪಿನಲ್ಲಿ ವಿದ್ಯಾರ್ಥಿಗಳು ಧೂಮಪಾನ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಲ್ಲದೆ ಸಿಗರೇಟ್‌ದಲ್ಲಿ ಮಾದಕ ವಸ್ತು ಹಾಕಿ ಸೇವಿಸುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾರ್ವಜನಿಕರು ತಿಳಿಸಿದರು.

ADVERTISEMENT

ವಿಡಿಯೊದಲ್ಲಿ ಚಿತ್ರೀಕರಿಸಿದ ಬಾಲಕನ ಮನೆಯ ಬಳಿ ಬಂದ ಸುಮಾರು 10–15 ಬಾಲಕರು, ಆ ವಿದ್ಯಾರ್ಥಿಯನ್ನು ಉಪಾಯದಿಂದ ಹೊರಗೆ ಕರೆಯಿಸಿಕೊಂಡು ಮನ ಬಂದಂತೆ ಥಳಿಸಿರುವ ವಿಡಿಯೊ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರಲ್ಲಿ ಬಾಲಕನ ಮನೆಯವರು ಹಲ್ಲೆ ಮಾಡಲು ಬಂದ ಪಟ್ಟಣದ ಬಾಲಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವುದು ಕಂಡುಬಂದಿದೆ.

ಈ ಕುರಿತು ಹಲ್ಲೆಗೆ ಒಳಗಾಗಿದ್ದಾನೆ ಎನ್ನಲಾಗಿರುವ ವಿದ್ಯಾರ್ಥಿಯ ಪಾಲಕರನ್ನು ಸಂಪರ್ಕಿಸಿದಾಗ, ‘ಶಾಲೆಯ ವಿದ್ಯಾರ್ಥಿಗಳು ಸಿಗರೇಟ್‌ ಸೇದುತ್ತಿರುವುದು ಅನೇಕ ದಿನಗಳಿಂದ ಮುಂದುವರಿದಿದೆ. ಇದೇ ವಿಷಯವನ್ನು ಹೊರಗೆ ಹಾಕಿದ್ದ ಇನ್ನೊಬ್ಬ ವಿದ್ಯಾರ್ಥಿಯ ಮೇಲೆಯೂ ಸಹಪಾಠಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಈಗ ನನ್ನ ಮಗನ ಮೇಲೆಯೇ ಹಲ್ಲೆ ನಡೆಸಿದ್ದಾರೆ’ ಎಂದರು.

‘ಹಲ್ಲೆ ನಡೆಸಿದ ಬಾಲಕರನ್ನು ನಾವೂ ಹೊಡೆಯಬಹುದಿತ್ತು. ಆದರೆ, ಯಾವುದೇ ಮಕ್ಕಳ ಭವಿಷ್ಯ ಹಾಳಾಗಬಾರದು ಎಂದು ಕೈಬಿಟ್ಟಿದ್ದೇವೆ. ಈ ಬಗ್ಗೆ ಸಂಬಂಧಿಸಿದ ಶಾಲೆಯ ಮುಖ್ಯಸ್ಥರನ್ನು ಭೇಟಿ ಮಾಡಿ ವಿಚಾರಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.