
ಕೊಪ್ಪಳ: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ಸೋಮವಾರ ರೈಲ್ವೆ ಸೇತುವೆ ಕಾಮಗಾರಿ ಭೂಮಿಪೂಜೆಗೆ ಬಂದಾಗ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲಿಗರು ಹಲ್ಲೆಗೆ ಯತ್ನಿಸಿ ಕೇಂದ್ರ ಸಚಿವರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಡಾ.ಬಸವರಾಜ ಕ್ಯಾಟವರ್ ಆರೋಪಿಸಿದರು.
ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ‘ಸಂಸದ ಮತ್ತು ಶಾಸಕರ ಸ್ವಗ್ರಾಮಕ್ಕೆ ಕೇಂದ್ರ ಸಚಿವರು ಬಂದಾಗ ಸ್ಥಳೀಯ ಜನಪ್ರತಿನಿಧಿಗಳು ನಡೆದುಕೊಂಡ ರೀತಿಯಿಂದಾಗಿ ಜಿಲ್ಲೆ ತಲೆ ತಗ್ಗಿಸುವಂತೆ ಆಗಿದೆ. ಜಿಲ್ಲೆಯನ್ನು ರಿಪಬ್ಲಿಕ್ ಆಫ್ ಕೊಪ್ಪಳ ಮಾಡಲು ಹೊರಟಿದ್ದಾರೆ. ಶಿವರಾಜ್ ತಂಗಡಗಿ ಅಮಾನವೀಯವಾಗಿ ನಡೆದುಕೊಂಡು, ಜನ ಭಯ ಪಡುವಂತೆ ಮಾಡಿದ್ದಾರೆ’ ಎಂದರು.
‘ಸೋಮಣ್ಣ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ರೈಲ್ವೆ ಅಭಿವೃದ್ಧಿಗೆ ಕೇಂದ್ರ ಯೋಜನೆ ರೂಪಿಸಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರೈಲ್ವೆ ವಲಯದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಅದನ್ನು ಸಹಿಸಲು ಆಗದೆ ಕೇಂದ್ರ ಸಚಿವರ ಕಾರ್ಯಕ್ರಮ ನಿಲ್ಲಿಸಲು ಕಾಂಗ್ರೆಸ್ಸಿನವರು ವಿಫಲ ಯತ್ನ ಮಾಡಿದರು. ಕಾರ್ಯಕ್ರಮ ಯಶಸ್ವಿಗೊಳಿಸದಂತೆ ಮೈಕ್ ಬಂದ್ ಮಾಡಿ ಸಣ್ಣತನ ತೋರಿಸಿದ್ದಾರೆ’ ಎಂದರು.
‘ಇದೇ ಕಾಮಗಾರಿಗೆ ಜುಲೈ 27ಕ್ಕೆ ಸಂಸದ ಕೆ.ರಾಜಶೇಖರ ಹಿಟ್ನಾಳ ಚಾಲನೆ ನೀಡಿದ್ದು, ಅವರು ಯಾವ ಶಿಷ್ಟಾಚಾರವನ್ನು ಪಾಲಿಸಿಲ್ಲ. ಕೇಂದ್ರ ಸರ್ಕಾರದಿಂದ ಜಿಲ್ಲೆ ಅಭಿವೃದ್ಧಿ ಆಗಬಾರದು ಎನ್ನುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ’ ಎಂದು ಆಪಾದಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ‘ಬಾಕಿ ಉಳಿದಿದ್ದ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಸಂಸದರು ಹಿಂದೆ ನಿಂತು, ಶಾಸಕ ಮತ್ತು ಸಚಿವರನ್ನು ಮುಂದೆ ಬಿಟ್ಟಿದ್ದರು. ಅಕ್ಷರಶಃ ಇಲ್ಲಿ ಭದ್ರತೆ ವೈಫಲ್ಯವಾಗಿದೆ. ಬಳ್ಳಾರಿಯಲ್ಲಿ ಆದಂತೆ ಇಲ್ಲಿ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.